ಬೆಳಗಾವಿ: 100 ಪರ್ಸೆಂಟ್ ಗೆಲ್ಲುವ ವಿಶ್ವಾಸ ನನಗೂ ಇದೆ, ನಮ್ಮ ಕಾರ್ಯಕರ್ತರಿಗೂ ಇದೆ. ಹೀಗಾಗಿ ನೂರಕ್ಕೆ ನೂರರಷ್ಟು 20 ವರ್ಷಗಳ ಬಳಿಕ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಎಲ್ಲಾ ಕಡೆ ಒಳ್ಳೆಯ ಕೆಲಸ ಮಾಡಿದ್ದಾರೆ. ಫೀಲ್ಡ್‌ನಲ್ಲಿದ್ದು ನಾವು ಚುನಾವಣೆ ಮಾಡಿದ್ದೇವೆ. ಎಲ್ಲಾ ಕಡೆ ನಾವು ಲೀಡ್ ಆಗಲಾಗಲ್ಲ, ಕೆಲವೊಂದು ಕಡೆ ಬಿಜೆಪಿ ಲೀಡ್ ಆಗಲಿದೆ. ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಲೀಡ್ ಆಗ್ತೇವೆ. ಮತದಾನ ಕಡಿಮೆ ಆದರೂ, ಹೆಚ್ಚು ಆದರೂ ನಮ್ಮ ಪರವಾಗಿಯೇ ಇದೆ. ಎಂಇಎಸ್‌ನವರು ಈಗಷ್ಟೇ ಅಲ್ಲ ಸಾಕಷ್ಟು ಬಾರಿ ಸ್ಪರ್ಧೆ ಮಾಡಿದ್ದಾರೆ. ಎಂಇಎಸ್ ಸ್ಪರ್ಧೆ ಲಾಭ ಯಾರಿಗಾಗುತ್ತೆ ಅಂತಾ ಯಾರಿಗೂ ಹೇಳಕ್ಕಾಗಲ್ಲ. ಒಟ್ಟಾರೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆಲ್ಲುತ್ತದೆ ಎಂದರು.
ಲಾಕ್ಡೌನ್ ನಿರ್ಧಾರಕ್ಕೆ ರಾಜ್ಯ ಸರ್ಕಾರ ಮುಂದಾಗಬಾರದು:
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಾಕ್ಡೌನ್ ನಿರ್ಧಾರಕ್ಕೆ ರಾಜ್ಯ ಸರ್ಕಾರ ಮುಂದಾಗಬಾರದು. ಲಾಕ್ಡೌನ್ ಮಾಡಿದ್ರೆ ಜನ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗುತ್ತದೆ. ಕಾರ್ಖಾನೆಗಳು ಬಂದ್ ಆಗುತ್ತವೆ. ಜನರಿಗೆ ತೊಂದರೆ ಆಗುತ್ತದೆ. ಅನವಶ್ಯಕವಾಗಿ ಸುತ್ತಾಡುವವರಿಗೆ ಕಡಿವಾಣ ಹಾಕಬೇಕು. ಕಳೆದ ವರ್ಷದ ಲಾಕ್ಡೌನ್ ಎಫೆಕ್ಟ್ನಿಂದ ಜನ ಇನ್ನೂ ಹೊರ ಬಂದಿಲ್ಲ. ಹೀಗಾಗಿ ಲಾಕ್ಡೌನ್ ಮಾಡದೇ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದರು.
ರಾಜ್ಯ ಸರ್ಕಾರ ತನ್ನದೇ ಲೋಕದಲ್ಲಿದೆ:
ಬೆಳಗಾವಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಸ್ಥಾನ ಖಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ತನ್ನದೇ ಲೋಕದಲ್ಲಿದೆ. ನಾಲ್ಕು ಜನ ಸಚಿವರು ಇದ್ರೂ ಎಲ್ಲಿಯೂ ಸಭೆ ಮಾಡಿಲ್ಲ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಂತ್ರಿ, ಸಚಿವರ ನಡುವೆ ಯಾವುದೇ ತಾಳ ಮೇಳ ಇಲ್ಲ. ಸರ್ಕಾರದ ಬಳಿ ಯಾವುದೇ ಸ್ಪಷ್ಟವಾದ ಆ್ಯಕ್ಷನ್ ಪ್ಲ್ಯಾನ್ ಇಲ್ಲ. ಸಾಮಾಜಿಕ ಅಂತರ ಕಾಪಾಡಲು ಕಲಂ 144 ಜಾರಿ ಮಾಡಬೇಕು. ಲಾಕ್ಡೌನ್ ಯಾವುದೇ ಸಂದರ್ಭದಲ್ಲೂ ಮಾಡಬೇಡಿ ಎಂದರು.
ರಾತ್ರಿ ಕರ್ಫ್ಯೂ ಬಗ್ಗೆ ಇನ್ನೂ ನಮಗೆ ತಿಳಿಯುತ್ತಿಲ್ಲ. ರಾತ್ರಿ ಎಲ್ಲರೂ ಮಲಗಿರ್ತಾರೆ, ನೈಟ್ ಕರ್ಫ್ಯೂ ಜಾರಿ ಮಾಡಿ ಏನ್ ಉಪಯೋಗವಾಗುತ್ತದೆ. ರಾತ್ರಿ ಬಾರ್ಗೆ ಎಷ್ಟು ಜನ ಹೋಗುತ್ತಾರೆ. ಶೇ. 1ರಷ್ಟು ಮಾತ್ರ ಹೋಗುತ್ತಾರೆ. ಬಾರ್ & ರೆಸ್ಟೋರೆಂಟ್ಗಳಲ್ಲಿ ರಿಸ್ಟ್ರಿಕ್ಷನ್ ಹಾಕಿ, ನಾಲ್ಕು ಜನ ಕೂರುವಲ್ಲಿ ಇಬ್ಬರನ್ನು ಕೂರಿಸಬೇಕು. ಬಾರ್ನಲ್ಲಿ ಸಿಸಿಟಿವಿ ಕ್ಯಾಮರಾ ಮೂಲಕ ಗಮನಹರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.