ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಪ್ರವೇಶ ದ್ವಾರದಲ್ಲಿ ತಡೆದರು. ಅದನ್ನು ಖಂಡಿಸಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಭ್ರಷ್ಟಾಚಾರ ಆರೋಪ, ನೆರೆ ಪರಿಹಾರ ತಾರತಮ್ಯ ಸೇರಿದಂತೆ ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ ನಗರದ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧವರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ವಿನೂತನ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿ ನಗರದಲ್ಲಿನ ರಾಣಿ ಚೆನ್ನಮ್ಮ ಸರ್ಕಲ್ ಹತ್ತಿರವಿರುವ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಿಂದ ಪ್ರಾರಂಭವಾದ ಟ್ರ್ಯಾಕ್ಟರ್ ರ‍್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ, ಆರ್ ಟಿಒ, ಅಶೋಕನಗರ ಹಾಗೂ ಗಾಂಧಿನಗರದ ಸುವರ್ಣಸೌಧದವರೆಗೆ ಮುಂದುವರೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಹೆಚ್.ಕೆ.ಪಾಟೀಲ್ ಸೇರಿದಂತೆ ಅನೇಕ ನಾಯಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಮಾರ್ಗದುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಯಿತು.
ಕಾಂಗ್ರೆಸ್ ನಾಯಕರ ಪ್ರತಿಭಟನಾ ರ‍್ಯಾಲಿ ಸುವರ್ಣ ಸೌಧ ಗೆಟ್ ತಲುಪಿದ್ದು, ಗೇಟ್ ಹೊರಗಡೆಗೆ ಕೈ ನಾಯಕರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಗೇಟ್ ನಲ್ಲಿರುವ ಪೊಲೀಸರು ವೆಹಿಕಲ್ ಪಾಸ್ ಕೇಳಿದ್ದಾರೆ. ಇದಕ್ಕೆ ಪೊಲೀಸರ ಮೇಲೆ ಗರಂ ಆದ ನಾಯಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆಯಿತು. ಬಳಿಕ ಟ್ರ್ಯಾಕ್ಟರ್ ಇಳಿದು ಗೇಟ್ ಒಳಗೆ ನುಗ್ಗಲು ಕೈ ನಾಯಕರ ಪ್ರಯತ್ನಿಸಿದರು. ಈ ವೇಳೆ ಮತ್ತೊಂದು ಗೇಟ್ ಅನ್ನು ಪೊಲೀಸರು ಬಂದ್ ಮಾಡಿದರು. ಕೊನೆಗೂ ಕೈ ನಾಯಕರು ಟ್ರ್ಯಾಕ್ಟರ್ನಲ್ಲಿ ಸುವರ್ಣ ವಿಧಾನಸೌಧದ ಒಳಗೆ ತೆರಳಿದರು.
ಸಿದ್ದರಾಮಯ್ಯಗೆ ಸ್ಪೀಕರ್ ಕಾಗೇರಿ ಕರೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕರೆ ಮಾಡಿದ ಸ್ಪೀಕರ್ ಕಾಗೇರಿ, ವಾಹನ ಒಳಗೆ ಬಿಡಲು ಹೇಳುತ್ತೇನೆ. ಒಳಗೆ ಬನ್ನಿ ಎಂದು ಮನವೊಲಿಸಿದರು. ಬಳಿಕ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದ ಕಾಗೇರಿ, ಕಾಂಗ್ರೆಸ್ ಮುಖಂಡರನ್ನು ಗೇಟ್ ಒಳಗೆ ಬಿಡಲು ಸೂಚಿಸಿದರು. ಸ್ಪೀಕರ್ ಆದೇಶದಂತೆ ಪ್ರತಿಭಟನಾಕಾರರು ಸುವರ್ಣಸೌಧದ ಗೇಟ್ ಪ್ರವೇಶಿಸಿದರು.