ಬೆಳಗಾವಿ: ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರ ಬೆಳಗಾವಿಯ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಹಲವು ನಾಯಕರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಕೈ ನಾಯಕರು, ಸುರೇಶ ಅಂಗಡಿ ಭಾವಚಿತ್ರಕ್ಕೆ ನಮಸ್ಕರಿಸಿ ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಂಗಡಿ ಅವರ ತಾಯಿ ಸೋಮವ್ವ, ಪತ್ನಿ ಮಂಗಳಾ, ಪುತ್ರಿಯರಿಗೆ ನಾಯಕರು ಧೈರ್ಯ ತುಂಬಿದರು. ಡಿಕೆಶಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಕೆಪಿಸಿಸಿ ವಕ್ತಾರೆಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಸೇರಿ ಹಲವರು ಸಾಥ್ ನೀಡಿದರು.
ಸುರೇಶ ಅಂಗಡಿ ನಿವಾಸಕ್ಕೆ ಡಿಕೆಶಿ ಸೇರಿ ಹಲವು ಕೈ ನಾಯಕರ ಭೇಟಿ ಅಂಗಡಿ ಸಜ್ಜನ ವ್ಯಕ್ತಿ: ಸುರೇಶ ಅಂಗಡಿ ಅವರ ನಿವಾಸದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ರಾಜಕಾರಣ ಏನೇ ಇರಲಿ ನಾನು ಅಸೆಂಬ್ಲಿಯಲ್ಲಿ ಮಾತನಾಡಿದ್ದೇನೆ. ಸುರೇಶ ಅಂಗಡಿ ಒಬ್ಬ ಸಜ್ಜನ ವ್ಯಕ್ತಿ, ರಾಷ್ಟ್ರಕ್ಕೆ ಆಸ್ತಿ ಇದ್ದಂಗೆ ಇದ್ರು. ಸುರೇಶ ಅಂಗಡಿಯವರು ಪಕ್ಷ ಸಂಘರ್ಷ, ಜಾತಿ ಸಂಘರ್ಷ ಮಾಡಿಕೊಂಡಿರಲಿಲ್ಲ. ಯಾವುದೇ ಪಕ್ಷದವರು ಹೋದರೂ ಸೌಮ್ಯತೆಯಿಂದ ವರ್ತಿಸುತ್ತಿದ್ದರು. ಬೆಳಗಾವಿಗೆ ಬಂದಾಗ ನನ್ನ ಕರುಳು ಸುರೇಶ್ ಅಂಗಡಿ ತಾಯಿ, ಕುಟುಂಬ ಭೇಟಿ ಮಾಡಬೇಕು ಅಂತ ಹೇಳಿತ್ತು. ಹೀಗಾಗಿ ಅವರ ಕುಟುಂಬಕ್ಕೆ ಧೈರ್ಯ ಹೇಳಬೇಕೆಂದು ಇಲ್ಲಿಗೆ ಭೇಟಿ ನೀಡಿದ್ದೇನೆ. ಸುರೇಶ ಅಂಗಡಿ ನನ್ನ ಒಳ್ಳೆಯ ಸ್ನೇಹಿತ, ಒಳ್ಳೆಯ ವ್ಯಕ್ತಿ ಆಗಿದ್ದರು. ಸೂತಕದ ಮನೆಯಲ್ಲಿ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ ಎಂದರು.