ಬೆಳಗಾವಿ: ಮಹದಾಯಿ ವಿವಾದ ಬಗೆಹರಿಸುವ ಇಚ್ಛಾಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗಿಲ್ಲ ಎಂದು ಗೋವಾ ಕಾಂಗ್ರೆಸ್ ಚುನಾವಣಾ ವೀಕ್ಷಕ ಪ್ರಕಾಶ್ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ.
ಗೋವಾದ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ, ಕರ್ನಾಟಕ, ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಪ್ರಧಾನಿ ಮೋದಿ ಮನಸ್ಸು ಮಾಡಿದ್ರೆ ಎರಡು ನಿಮಿಷದಲ್ಲಿ ವಿವಾದ ಬಗೆಹರಿಸಬಹುದು. ಮಹದಾಯಿ ಸಂಬಂಧ ಕರ್ನಾಟಕ ಗೋವಾ ಜಗಳವಾಡಲಿ ಎಂಬುದು ಅವರ ಬಯಕೆಯಾಗಿದೆ ಎಂದರು.
ಮಹದಾಯಿ ವಿವಾದದ ವಿಚಾರಣೆ ನಡೆಯುತ್ತಿದೆ. ಈ ವಿವಾದ ಬಗೆಹರಿಸಲು ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚುನಾವಣೆ ವೇಳೆ ವಿಷಯ ಪ್ರಸ್ತಾಪಿಸಿ ಬಿಟ್ಟು ಬಿಡುತ್ತಾರೆ. ಇದರಿಂದ ಕರ್ನಾಟಕ, ಗೋವಾದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಪ್ರಕಾಶ್ ರಾಥೋಡ್ ಅಭಿಪ್ರಾಯಪಟ್ಟರು.
ಸಮುದ್ರ ಸೇರುವ ನೀರನ್ನು ನಾವು ಕುಡಿಯಲು ಕೇಳುತ್ತಿದ್ದೇವೆ. ಕುಡಿಯಲು, ಕೃಷಿ ಬಳಕೆಗೆ ನೀರು ಕೇಳುವ ಹಕ್ಕು ಗೋವಾಕ್ಕೂ ಇದೆ. ಸಮುದ್ರಕ್ಕೆ ಹೋಗುವ ಮಹದಾಯಿ ನೀರನ್ನು ಬಳಸಬೇಕು ಎಂದು ನಾನು ಬಯಸುತ್ತೇವೆ. ಪ್ರಧಾನಿ ಮೋದಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಸಿಎಂ ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಯುಕೆಪಿ, ತಮಿಳುನಾಡು ನದಿ ಜೋಡಣೆ ವಿರುದ್ಧ ಹೊಸ ಪಿಟಿಷನ್ ಸಲ್ಲಿಸಲು ನಿರ್ಧಾರ: ಸಿಎಂ ಬೊಮ್ಮಾಯಿ