ಬೆಳಗಾವಿ: ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸೆ. 24 ರಂದು ಬೆಳಗಾವಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಈ ಪ್ರತಿಭಟನೆ ಜನರ ಒಳತಿಗಾಗಿ ಅಲ್ಲವೆಂದು ಕಾಂಗ್ರೆಸ್ ಹೋರಾಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ ಪರಿಹಾರ ಕಾರ್ಯವನ್ನು ಸರ್ಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನು, ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲು ಜನರು ಪರ ವಿರೋಧ ಅಭಿಪ್ರಾಯ ನೀಡಿರುವುದನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ಪರಾಮರ್ಶೆ ಮಾಡಲಿದೆ. ಸ್ಥಳೀಯ ಶಾಸಕರು ನೀಡುವ ಮಾಹಿತಿ ಆಧರಿಸಿ ಸರ್ಕಾರ ಜಿಲ್ಲೆಯ ವಿಭಜಿಸುವ ಕೆಲಸ ಮಾಡಲಿದೆ ಎಂದು ಶೆಟ್ಟರ್ ಹೇಳಿದ್ರು.
ಇನ್ನು ನೆರೆ ಸಂತ್ರಸ್ತರ ಪರಿಹಾರ ಹಾಗೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು ಎಂದು ಸಂತ್ರಸ್ತರು ಪಟ್ಟು ಹಿಡಿದ ಹಿನ್ನಲೆ ಸ್ವಲ್ಪ ಗೊಂದಲವಾಗಿದ್ದು, ಸಂತ್ರಸ್ತರಿಗೆ ಪ್ಯಾಕೇಜ್ ಮಾದರಿಯಲ್ಲಿ ಪರಿಹಾರ ಧನ ನೀಡಲಾಗುವುದು ಎಂದರು. ಈಗಾಗಲೇ ರಾಜ್ಯ ಸರ್ಕಾರ ಪ್ರವಾಹದಿಂದ ಹಾನಿಗೊಳಗಾದವರ ಮನೆ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ ಆರಂಭಿಸಲು ತಕ್ಷಣವೇ ಒಂದು ಲಕ್ಷ ರೂಪಾಯಿ ಬಿಡುಗಡೆಗೆ ಸಚಿವ ಸಂಪುಟ ಸಭೆ ನಿರ್ಧರಿಸಿದ್ದು, ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆಗೆ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಸಚಿವ ಶೆಟ್ಟರ್ ಮಾಹಿತಿ ನೀಡಿದ್ರು.