ಬೆಳಗಾವಿ/ಚಿಕ್ಕೋಡಿ: ದೇಶದಲ್ಲಿ ಕಾಂಗ್ರೆಸ್ ತನ್ನ ಅಧಿಕಾರವನ್ನು ಯಾವಾಗ ಕಳೆದುಕೊಂಡಿದೆಯೋ ಆಗೆಲ್ಲ ಗಲಭೆಗಳನ್ನ ಸೃಷ್ಟಿಸಿದೆ. ಅಧಿಕಾರ ಇದ್ದಾಗ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಆಳ್ವಿಕೆಯಲ್ಲಿ ಘನಘೋರ ಹತ್ಯಾಕಾಂಡಗಳನ್ನು ಕಂಡಿದ್ದೇವೆ, ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಕೆಲವು ಘಟನೆಗಳನ್ನು ನೆನಪಿಸಿಕೊಂಡು ಕಾಂಗ್ರೆಸ್ ಮುಖಂಡರು ಮಾತನಾಡಬೇಕು. ದೆಹಲಿಯಲ್ಲಿ ನಡೆದ ಗಲಭೆ ಹಿಂದೆ ಕಾಂಗ್ರೆಸ್ ಪಕ್ಷದ ಷಡ್ಯಂತ್ರ ಇದೆ ಎಂದು ದೂರಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ಸಂದರ್ಭದಲ್ಲಿ ಯಾಕೆ ಗಲಭೆ ಆರಂಭವಾಯಿತು?. ದೇಶಕ್ಕೆ, ಪ್ರಧಾನಿ ಮೋದಿಗೆ ಹಾಗೂ ಬಿಜೆಪಿಗೆ ಕಳಂಕ ತರುವ ಇಚ್ಛೆ ಕಾಂಗ್ರೆಸ್ ನಲ್ಲಿದೆ. ಹುಡುಗರ ಕೈಯಲ್ಲಿ ಪಿಸ್ತೂಲ್, ಆಯುಧಗಳು ಎಲ್ಲಿಂದ ಬಂದವು?. ಕಾಂಗ್ರೆಸ್ ಪಕ್ಷ ದೇಶಕ್ಕೆ ಬೆಂಕಿ ಹಾಕಿ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹುಕ್ಕೇರಿ ಶಾಸಕ ಉಮೇಶ ಕತ್ತಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾದ ವಿಚಾರದ ಬಗ್ಗೆ ಕೇಳಿದಾಗ, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲವೆಂದು ಹೇಳಿದ್ರು.