ಬೆಳಗಾವಿ: ಮುಖ್ಯಮಂತ್ರಿ ಹುದ್ದೆಯಿಂದ ಬಿಎಸ್‌ವೈ ಕೆಳಗಿಳಿಯುತ್ತಿದ್ದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮೂಲ ಬಿಜೆಪಿಗರು ಹಾಗೂ ಕೆಜೆಪಿಯಿಂದ ಬಿಜೆಪಿ ಸೇರಿದ್ದ ಯಡಿಯೂರಪ್ಪ ಅವರ ಆಪ್ತರ ಮಧ್ಯೆ ಶೀತಲ ಸಮರ ಶುರುವಾಗಿದೆ.
ಕೆಜೆಪಿ ಸೇರಿ ಬಿಎಸ್‌ವೈ ಜೊತೆಗೆ ಗುರುತಿಸಿಕೊಂಡಿರುವ ಬುಡಾ (ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಗೂಳಪ್ಪ ಹೊಸಮನಿ ಹಾಗೂ ಬಿಜೆಪಿ ನಗರ ಶಾಸಕರ ಮಧ್ಯೆ ವಾರ್ ಶುರುವಾಗಿದೆ.
ಬುಡಾ ಸಾಮಾನ್ಯ ಸಭೆಗೆ ಬಿಜೆಪಿ ನಗರ ಶಾಸಕರು ಗೈರಾಗುವ ಮೂಲಕ ಕೋರಂ ಕೊರತೆಗೆ ಕಾರಣರಾಗಿದ್ದಾರೆ. ಬಿಎಸ್‌ವೈ ಆಪ್ತರಾಗಿರುವ ಬುಡಾ ಅಧ್ಯಕ್ಷ ಹಾಗೂ ನಗರದ ಇಬ್ಬರು ಶಾಸಕರ ಮಧ್ಯೆ ವೈಮನಸ್ಸಿನಿಂದ ನಗರ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಎಂಬ ಮಾತುಗಳು ಕೇಳಿಬಂದಿವೆ.
ಬುಡಾಗೆ ನಾಲ್ವರು ಶಾಸಕರು, ನಾಲ್ವರು ನಾಮ ನಿರ್ದೇಶಿತರು ಸದಸ್ಯರಿದ್ದಾರೆ. ಸಭೆಗೆ ನಾಮ ನಿರ್ದೇಶಿತ ಸದಸ್ಯರು, ಇಬ್ಬರು ಬಿಜೆಪಿ ಶಾಸಕರು ಸತತ ಗೈರಾಗುತ್ತಿದ್ದು, ಸೋಮವಾರ ಕರೆಯಲಾಗಿದ್ದ ಸಭೆ ಕೋರಂ ಅಭಾವದಿಂದ ಅ.25ಕ್ಕೆ ಮುಂದೂಡಿಕೆಯಾಗಿದೆ.
ಬಿಎಸ್‌ವೈ ಆಪ್ತರು ಎನ್ನುವ ಕಾರಣಕ್ಕೆ ತಮ್ಮದೇ ಪಕ್ಷದ ಬುಡಾ ಅಧ್ಯಕ್ಷರ ವಿರುದ್ಧವೇ ಬಿಜೆಪಿ ಶಾಸಕರು ತಿರುಗಿಬಿದ್ದಿದ್ದು, ಬುಡಾದಲ್ಲಿ ತಮ್ಮ ಹಿಡಿತ ಸಾಧಿಸಲು ಉಭಯ ಶಾಸಕರ ಯೋಜನೆ ರೂಪಿಸಿದ್ದಾರಾ? ಎಂಬ ಅನುಮಾನ ಮೂಡತೊಡಗಿವೆ.
ಹೊಂದಾಣಿಕೆ ಕೊರತೆ-ನಗರದ ಅಭಿವೃದ್ಧಿಗೆ ಕಂಟಕ
ಶಾಸಕರ ಬಳಿ ಸಮಯ ಕೇಳಿಯೇ ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ ಸಭೆ ನಿಗದಿ ಮಾಡಿದ್ದರು. ಬೆಳಗಾವಿ ನಗರ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಚರ್ಚೆಗೆ ಕರೆದಿದ್ದ ಸಭೆ ಮುಂದೂಡಿಕೆಯಾಗಿದ್ದು, ಕಮಲ ನಾಯಕರಲ್ಲಿನ ಹೊಂದಾಣಿಕೆ ಕೊರತೆಯಿಂದ ನಗರದ ಅಭಿವೃದ್ಧಿಗೆ ಕಂಟಕವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ ಅವರು ಶಾಸಕರು, ಸದಸ್ಯರು ಸಭೆಗೆ ಏಕೆ ಗೈರಾಗಿದ್ದಾರೆ ಅನ್ನೋದು ಗೊತ್ತಿಲ್ಲ. ಬುಡಾ ಅಧಿಕಾರಿಗಳು ಹೊರತುಪಡಿಸಿ ಕೆಲ ಅಧಿಕಾರಿಗಳು ಸಭೆಗೆ ಗೈರಾಗುತ್ತಿದ್ದಾರೆ. ಈ ಬಗ್ಗೆ ಡಿಸಿ ಗಮನಕ್ಕೆ ತಂದಿದ್ದೇನೆ. ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆದಿದೆ ಎಂದು ತಮ್ಮದೇ ಪಕ್ಷದ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಭೆಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೋರಂ ಸಮಸ್ಯೆಯಿಂದ ಸಭೆ ನಡೆಸಲಾಗದೆ ವಾಪಸ್ ಆದರು.