ಬೆಳಗಾವಿ: ಅಥಣಿಯಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಇಡೀ ರಾಜ್ಯ ಅಥಣಿಯನ್ನು ನೋಡುತ್ತಿದೆ. ಅಥಣಿಯಿಂದ ಯಡಿಯೂರಪ್ಪ ದಂಡಯಾತ್ರೆ ಆರಂಭವಾಗಿದೆ. ಇಲ್ಲಿಂದ ದಂಡಯಾತ್ರೆ ಆರಂಭವಾಗಿರುವುದರಿಂದ ಇಲ್ಲಿ ಕುಮಟಳ್ಳಿಯವರನ್ನು 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಈ ದಂಡಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಈ ಭಾಗದ ಅಭಿವೃದ್ಧಿಗೆ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟವರು ಲಕ್ಷ್ಮಣ್ ಸವದಿಯವರು, ಈ ಹಿಂದೆ ಇಲ್ಲಿನ ಕೆಲ ಭಾಗದ ಜನ ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುತ್ತಿದ್ದರು. ಆದರೆ ಈಗ ಮಹಾರಾಷ್ಟ್ರದ ಕೆಲ ಗ್ರಾಮಗಳ ಜನ ಅಭಿವೃದ್ಧಿಗಾಗಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎನ್ನುತ್ತಿದ್ದಾರೆ ಇದು ಇಲ್ಲಿ ಲಕ್ಷ್ಮಣ್ ಸವದಿಯವರು ನಡೆಸಿದ ಅಭಿವೃದ್ಧಿಯ ಫಲ. ನಿಜವಾದ ಬದಲಾವಣೆ ಎಂದರೆ ಇದು ಎಂದರು.
ಅಥಣಿಯಲ್ಲಿ ಪ್ರಚಾರ ನಡೆಸಿ ಕಾಗವಾಡಕ್ಕೆ ಆಗಮಿಸಿದ ಯಡಿಯೂರಪ್ಪ, ಇಲ್ಲಿಯೂ ಶ್ರೀಮಂತ್ ಪಾಟೀಲ್ ಪರ ಪ್ರಚಾರ ನಡೆಸಿದರು. ಶ್ರೀಮಂತ್ ಪಾಟೀಲ್ ಸೇರಿದಂತೆ ಅನರ್ಹ ಶಾಸಕರೆಲ್ಲರೂ ರಾಜೀನಾಮೆ ನೀಡದಿದ್ದರೆ ಇವತ್ತು ನಿಮ್ಮ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ. ಇಲ್ಲಿ ಶ್ರೀಮಂತ್ ಪಾಟೀಲ್ರನ್ನು ಗೆಲ್ಲಿಸಿ ಕೊಡಿ, ಇಲ್ಲಿ ಶ್ರೀಮಂತ್ ಪಾಟೀಲ್ ಹಾಗೂ ಅಥಣಿಯಲ್ಲಿ ಮಹೇಶ್ ಕುಮಟಳ್ಳಿಯವರನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದರು.
ನಂತರ ಗೋಕಾಕ್ಗೆ ಆಗಮಿಸಿದ ಯಡಿಯೂರಪ್ಪ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಮೇಶ್ ಜಾರಕಿಹೊಳಿ ಪರ ಪ್ರಚಾರ ನಡೆಸಿದರು. ರಮೇಶ ಜಾರಕಿಹೊಳಿ ಅವರ ಗಟ್ಟಿ ನಿರ್ಧಾರದಿಂದ ನಾನು ಸಿಎಂ ಆಗಿದ್ದೇನೆ. ಗೋಕಾಕ ನಗರದ ಲಿಂಗಾಯತ ಮತದಾರರು ಯಾವುದೇ ವ್ಯಾಮೋಹಕ್ಕೆ ಒಳಗಾಗಬಾರದು. ಯಡಿಯೂರಪ್ಪ ಸಿಎಂ ಆಗಲು, ಶೆಟ್ಟರ್, ಜೊಲ್ಲೆ ಸಚಿವರಾಗಲು ರಮೇಶ ಕಾರಣ. ರಮೇಶ 17 ಜನ ಶಾಸಕರನ್ನು ಕರೆತರದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಗೆದ್ದರಷ್ಟೇ ನನಗೆ ಸಮಾಧಾನ. ಈ ಚುನಾವಣೆಯಲ್ಲಿ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಸಿಎಂ ಮನವಿ ಮಾಡಿದರು.