ಬೆಳಗಾವಿ : ನಮ್ಮಲ್ಲಿ ಮಂಚ ಮುರಿಯೋರು ಇಲ್ಲ. ಬರೀ ನೆಲನೇ ಇರೋದು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾರ್ಮಿಕವಾಗಿ ನುಡಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿಡಿ ಸಂಬಂಧ ಇಂಜಕ್ಷನ್ ಆರ್ಡರ್ ಪಡೆದ ವಲಸಿಗರು ವಾಪಸ್ ಕಾಂಗ್ರೆಸ್ಗೆ ಮರಳುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಚ ಮುರಿಯುವವರು ಕೋರ್ಟ್ಗೆ ಹೋಗುತ್ತಿದ್ದಾರೆ. ನಮ್ಮಲ್ಲಿ ಮಂಚ ಮುರಿಯೋರು ಇಲ್ಲ. ನೆಲವೇ ಇರೋದು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಇಬ್ರಾಹಿಂ ಸಂಭಾಷಣೆ ವೈರಲ್ : ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿನ ನನ್ನ ಸಂಭಾಷಣೆಯ ವಿಡಿಯೋ ನಿನ್ನೆ ವೈರಲ್ ಆಗಿತ್ತು. ಆ ಬಗ್ಗೆ ಸೈಬರ್ ಕ್ರೈಮ್ಗೆ ದೂರು ಕೊಡುತ್ತಿದ್ದೇನೆ ಎಂದು ತಿಳಿಸಿದರು. ಅಲ್ಲದೆ, ಅದೊಂದು ನೀಚ ಕೆಲಸ. ಧೈರ್ಯವಾಗಿ ಎದುರಿಸಲು ಶಕ್ತಿ ಇಲ್ಲದವರು ಈ ರೀತಿಯ ಕೆಲಸ ಮಾಡಿದ್ದಾರೆ. ಇದನ್ನು ಯಾರೂ ಮಾಡಿದ್ದಾರೆ ಎಂದು ಗೊತ್ತಿಲ್ಲ. ಬಿಜೆಪಿಯವರೋ, ಸಂಘದವರೋ ತಿಳಿದಿಲ್ಲ. ಹಿಂಬಾಗಿಲಿನಿಂದ ಈ ರೀತಿ ಏಕೆ ಕೆಲಸ ಮಾಡುವುದು ಎಂದು ಪ್ರಶ್ನಿಸಿದರು.
ಧಮ್ ಇದ್ರೆ ತನಿಖೆ ಮಾಡಿ : ಪರ್ಸೆಂಟೇಜ್ ಪಡೆಯುವ ಬಗ್ಗೆ ನೋಂದಾಯಿತ ಗುತ್ತಿಗೆದಾರರ ಸಂಘ ಆರೋಪ ಮಾಡಿದೆ. ಆರೋಪ ಸುಳ್ಳಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲವಾದರೆ ಒಪ್ಪಿಕೊಳ್ಳಲಿ ಎಂದು ಬೊಮ್ಮಾಯಿಗೆ ಸವಾಲು ಹಾಕುತ್ತೇನೆ. ಮೈದಾನಕ್ಕೆ ಬನ್ನಿ, ಧಮ್ ಇದ್ದರೆ ತನಿಖೆ ಮಾಡಿ ಎಂದು ಸವಾಲು ಹಾಕಿದರು.