ಬೆಳಗಾವಿ: ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಮಾಡಿದ ಪ್ರಕರಣದ ತನಿಖೆಯನ್ನು ರಾಜ್ಯ ಗೃಹ ಇಲಾಖೆ ಸಿಐಡಿ (ಅಪರಾಧ ತನಿಖಾ ವಿಭಾಗ)ಗೆ ವಹಿಸಿದೆ. ಹೀಗಾಗಿ ಬೆಳಗಾವಿ ನಗರದ ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿದೆ.
ಬೆಳಗಾವಿಯಲ್ಲಿ ಅ. 24ರಂದು ನಡೆದಿದ್ದ ಪರೀಕ್ಷೆಯಲ್ಲಿ ನಕಲು ಮಾಡಲಾಗಿತ್ತು. ಪರೀಕ್ಷೆ ವೇಳೆಯಲ್ಲಿ ಬ್ಲ್ಯೂಟೂತ್ ಬಳಸಿ ನಕಲಿಗೆ ಯತ್ನಿಸಲಾಗಿತ್ತು. ಆ ಸಾಧನ ಬಳಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾಹಿತಿಯನ್ನು ನಕಲು ತಂಡಕ್ಕೆ ರವಾನಿಸಿ ನಂತರ ತಂಡದಿಂದ ಉತ್ತರ ಪಡೆದುಕೊಂಡು ಪರೀಕ್ಷಾರ್ಥಿಗಳು ನಕಲು ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ರಾಮತೀರ್ಥ ನಗರದಲ್ಲಿ ದಾಳಿ ನಡೆಸಿದ್ದ ಬೆಳಗಾವಿ ಪೊಲೀಸರು 12 ಜನರನ್ನು ಬಂಧಿಸಿದ್ದರು. ಬಂಧಿತರಿಂದ 33 ಮೊಬೈಲ್ ಫೋನ್, 9 ಮಾಸ್ಟರ್ ಕಾರ್ಡ್ ಡಿವೈಸ್, 13 ಬ್ಲ್ಯೂಟೂತ್, 3 ಟ್ಯಾಬ್ ಹಾಗು ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿತ್ತು.
ಪೊಲೀಸ್ ಕಾನ್ಸ್‌ಟೇಬಲ್ ಕೈವಾಡ ಇರುವ ಶಂಕೆ:
ಅಲ್ಲದೇ ಇಬ್ಬರು ಪರೀಕ್ಷಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಕೈವಾಡ ಇರುವ ಶಂಕೆಯಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲು ರಾಜ್ಯ ಗೃಹ ಇಲಾಖೆ ಆದೇಶಿಸಿದೆ.
ಪೊಲೀಸ್ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದಲ್ಲಿ ಗೋಕಾಕ್, ಮೂಡಲಗಿ ತಾಲೂಕಿನ ಅನೇಕರ ಬಂಧನ ಸಾಧ್ಯತೆ ಇದೆ. ಸಿಐಡಿ ತನಿಖೆಯಿಂದ ದೊಡ್ಡ ಜಾಲ ಪತ್ತೆ ಸಾಧ್ಯತೆಯಿದೆ ಎನ್ನಲಾಗ್ತಿದೆ.