ಚಿಕ್ಕೋಡಿ: ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ವರವಾಗಬೇಕಿದ್ದ ಸರ್ಕಾರಿ ಶಾಲೆಯೊಂದು ದನದ ಕೊಟ್ಟಿಗೆಯಂತಾಗಿದೆ. ಮಕ್ಕಳು ಆಟವಾಡಬೇಕಿದ್ದ ಶಾಲಾ ಆವರಣ ಹಾಗು ಕಟ್ಟಡದ ಮುಂಭಾಗದಲ್ಲಿ ಮೇವು, ಜಾನುವಾರುಗಳು ತುಂಬಿಕೊಂಡಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿರುವ ಬಾದಾಮಿ ಖೋಡಿಯ ಸರ್ಕಾರಿ ಶಾಲೆಯ ದುಸ್ಥಿತಿಯಿದು. ಶಾಲಾ ಆವರಣದಲ್ಲಿ ಜಾನುವಾರು ಕಟ್ಟುವ ಮೂಲಕ ಅಲ್ಲಿನ ಗ್ರಾಮಸ್ಥರು ಶಿಕ್ಷಣ ವ್ಯವಸ್ಥೆಗೆ ಚ್ಯುತಿ ತರುವ ಕೆಲಸ ಮಾಡಿದ್ದಾರೆ.
ಇತ್ತ ಶಾಲೆ ಮತ್ತು ಶಾಲಾ ಆವರಣವನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳಬೇಕಿದ್ದ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತುಕೊಂಡಿದೆ. ಪರಿಣಾಮ, ಪಾಠ ಕೇಳುವ ವಿದ್ಯಾರ್ಥಿಗಳೆಲ್ಲರೂ ಶಾಲಾ ಕೊಠಡಿ ಹೊರಗೆ ಕುಳಿತುಕೊಳ್ಳುತ್ತಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಶಾಲಾ ಆವರಣದಲ್ಲಿ ಜಾನುವಾರು ಕಟ್ಟುವುದನ್ನು ಬಿಡಬೇಕು ಎಂದು ಕೆಲ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬಂದ್ ಆಗಿದ್ದ ಶಾಲೆಗಳು ಇತ್ತೀಚೆಗಷ್ಟೇ ಆರಂಭವಾಗಿವೆ. ಆದರೆ ಮಕ್ಕಳಿಗೆ ಮೂಲಭೂತ ಸೌಲಭ್ಯ ಒದಗಿಸದೇ ಇರುವ ಇಂತಹ ಶಾಲೆಗಳ ಮುಖ್ಯೋಪಾಧ್ಯಾಯ ಹಾಗು ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮುಂದೆ ಈ ರೀತಿ ಆಗದಂತೆ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುವುದು ಎಲ್ಲರ ಒತ್ತಾಸೆಯಾಗಿದೆ.
ಇದನ್ನೂ ಓದಿ: ನೆನೆಗುದಿಗೆ ಬಿದ್ದಿರುವ ರಾಜ್ಯದ ಎಂಟು ರೈಲ್ವೆ ಯೋಜನೆಗೆ ಕಾಯಕಲ್ಪ: ಸಚಿವ ವಿ.ಸೋಮಣ್ಣ