ಅಥಣಿ: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಸಿ. ಮನಗೂಳಿ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಸದ್ಯ ಉಪಚುನಾವಣೆ ನಡೆಯಲಿದೆ. ಸಿಂದಗಿ ಕ್ಷೇತ್ರದಿಂದ ಡಿಸಿಎಂ ಲಕ್ಷ್ಮಣ ಸವದಿ ಸ್ವರ್ಧೆ ಮಾಡುತ್ತಾರೆ ಎಂಬ ಮಾತಿಗೆ ಸವದಿ ಸುಪುತ್ರ ಚಿದಾನಂದ ಸವದಿ ಪ್ರತಿಕ್ರಿಯಿಸಿದ್ದಾರೆ.
ಪಟ್ಟಣದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಚಿದಾನಂದ ಸವದಿ ಅವರು, ಎಂ.ಸಿ. ಮನಗೂಳಿ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಥವಾ ಚಿದಾನಂದ ಸವದಿ ಸ್ಪರ್ಧೆ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಇದೆಲ್ಲವೂ ಊಹಾಪೋಹ. ಉಪಚುನಾವಣೆಯಲ್ಲಿ ಸ್ವರ್ಧೆ ಮಾಡಿ ಎಂಬ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಡಿಸಿಎಂ ಸವದಿ ಅವರು ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ಶಿಸ್ತಿನ ಸಿಪಾಯಿಯಾಗಿ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ಹೇಳಿದರು.
ಸಿಂದಗಿ ಉಪ ಚುನಾವಣೆಯಲ್ಲಿ ಚಿದಾನಂದ ಸವದಿ ಅವರು ಸ್ವರ್ಧಿಸಲಿ ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಆದರೆ ನಾನು ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ. ಒಂದು ವೇಳೆ ಪಕ್ಷದ ವರಿಷ್ಠರು ನಮ್ಮ ತಂದೆಗೆ ಗ್ರೀನ್ ಸಿಗ್ನಲ್ ನೀಡಿದರೆ ಸ್ವರ್ಧೆಗೆ ಸಿದ್ಧರಿದ್ದೇವೆ. ಮತ್ತು ಸಿಂದಗಿಯಲ್ಲಿ ಸ್ಥಳೀಯವಾಗಿ ಯಾರೇ ಬಿಜೆಪಿ ಅಭ್ಯರ್ಥಿಯಾದ್ರು ಚುನಾವಣೆಯಲ್ಲಿ ಗೆಲುವು ಸಾಧಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿದಾನಂದ, ಅವರು ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸ್ವರ್ಧೆ ಮಾಡುವುದಿಲ್ಲ. ಪಕ್ಷ ತೀರ್ಮಾನಿಸಿದ್ರೆ ಮಾಡಿದರೆ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ. ಸದ್ಯಕ್ಕೆ ನಾನು ಹಾಗೂ ನಮ್ಮ ತಂದೆಯವರು ಯಾವುದೇ ಉಪಚುನಾವಣೆಯಲ್ಲಿ ಸ್ವರ್ಧಿಸುತ್ತಿಲ್ಲ ಎಂದು ಚಿದಾನಂದ ಸ್ಪಷ್ಟಪಡಿಸಿದರು.