ಬೆಳಗಾವಿ/ ಕಾರವಾರ : ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆ ಹಿನ್ನಲೆ ಬೆಳಗಾವಿ ಹಾಗು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.
ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಾದ ಅಥಣಿ, ಗೋಕಾಕ್ ಹಾಗೂ ಕಾಗವಾಡ ತೆರವಾದ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದ್ದು. ಸಂಪೂರ್ಣ ಬೆಳಗಾವಿ ಜಿಲ್ಲೆಗೆ ತಕ್ಷಣವೇ ಜಾರಿಯಾಗುವಂತೆ ನೀತಿ ಸಂಹಿತೆಗೆ ಆದೇಶ ನೀಡಲಾಗಿದೆ. ಜೊತೆಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುವ ಪರಿಹಾರ ಕೆಲಸಕ್ಕೆ ಯವುದೇ ರೀತಿಯ ಅಡಚಣೆ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಸ್. ಬಿ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರಕ್ಕೆ ಸಹ ಉಪ ಚುನಾವಣೆ ಘೋಷಣೆಯಾಗಿದ್ದು, ಸೆ. 23 ರಿಂದ ಚುನಾವಣೆ ಮುಗಿಯುವವರೆಗೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಯಲ್ಲಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು 1,72,630 ಮತದಾರರಿದ್ದು, ಅದರಲ್ಲಿ 87,942 ಪುರುಷರು, 84,689 ಮಹಿಳಾ ಮತ್ತು ಒಬ್ಬರು ಇತರೆ ಮತದಾರರು ಇದ್ದಾರೆ. ಉಪಚುನಾವಣೆಯು ಯಲ್ಲಾಪುರ ಹಾಗೂ ಮುಂಡಗೋಡ ಸಂಪೂರ್ಣ ತಾಲ್ಲೂಕು ಮತ್ತು ಶಿರಸಿಯ ಬನವಾಸಿ ಭಾಗದ ಒಟ್ಟು 231 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಇನ್ನು ಚುನಾವಣೆಯಲ್ಲಿ ನೆರೆ ಪರಿಹಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ನೀತಿ ಸಂಹಿತೆ ಇದ್ದರೂ, ಕೆಲ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳಿಗೆ ಚುನಾವಣಾ ಆಯೋಗದಿಂದ ತಕ್ಷಣ ಅನುಮತಿ ಪಡೆದು ಮಾಡಲು ಅವಕಾಶವಿದೆ. ಚುನಾವಣಾ ವ್ಯಾಪ್ತಿಯ ಅಭ್ಯರ್ಥಿಗಳು ಹೊರ ಭಾಗದಲ್ಲಿ ನಡೆಸುವ ಕಾರ್ಯಕ್ರಮಗಳ ಮೇಲೆ ನಿಗಾ ಇಡಲಾಗುತ್ತದೆ. ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಯಲ್ಲಿ ನಡೆಸುವ ಚಟುವಟಿಕೆಗಳಿಗೆ ಮುಕ್ತವಾಗಿ ಅವಕಾಶವಿದೆ ಎಂದು ತಿಳಿಸಿದರು.