ಬೆಳಗಾವಿ: ಗ್ರಾಮ ದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಹಾಕಿದ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರ ಗ್ರಾಮ ದೇವತೆ ಜಾತ್ರೆಯಲ್ಲಿ ಉಡಿ ತುಂಬುವ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ದಲಿತ ಸಮುದಾಯದ ಮಹಿಳೆಯರಿಗೆ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೇ ದಲಿತರ ಹಣೆಗೆ ಅಂಗಾರ, ಭಂಡಾರ ಹಚ್ಚದ ಬಗ್ಗೆಯೂ ಆರೋಪ ಕೇಳಿ ಬಂದಿದೆ.
ಅಲ್ಲದೇ ದಲಿತ ಸಮುದಾಯದವರಿಗೆ ಜಾತಿ ನಿಂದನೆ, ದಲಿತ ಯುವಕರ ಹೇರ್ ಕಟಿಂಗ್ಗೆ ನಿರಾಕರಣೆ ಮಾಡಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಬೆಳಗಾವಿ ಎಸಿ ರವೀಂದ್ರ ಕರಿಲಿಂಗಣ್ಣನವರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಉಮಾ ಸಾಲಿಗೌಡರ್, ಡಿವೈಎಸ್‌ಪಿ ಶಿವಾನಂದ ಕಟಗಿ ಸೇರಿ ಹಲವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸವರ್ಣೀಯರು ಹಾಗೂ ದಲಿತರ ಮುಖಂಡರ ಜೊತೆಗೆ ಸಂಧಾನ ಸಭೆ ಮಾಡಿದರು.
ಅಧಿಕಾರಿಗಳ ಎದುರೇ ದಲಿತರು ಹಲವು ಗಂಭೀರ ಆರೋಪ ಮಾಡಿದರು. ಗ್ರಾ.ಪಂನಲ್ಲಿ ಸಭೆ ಕರೆದ ವೇಳೆ ಸವರ್ಣೀಯರು ದಲಿತರನ್ನು ಪ್ರತ್ಯೇಕವಾಗಿ ಕೂರಿಸುತ್ತಾರೆ ಎಂದು ಆರೋಪಿಸಿದರು. ಆದರೆ ದಲಿತರ ಆರೋಪಗಳನ್ನು ಸವರ್ಣೀಯರು ಅಲ್ಲಗಳೆದರು. ಉಡಿ ತುಂಬಲು ನಾವು ಯಾವುದೇ ನಿರ್ಬಂಧ ಹೇರಿಲ್ಲ ಎಂದು ಸಮರ್ಥಿಸಿಕೊಂಡರು.
ಆದರೆ ದಲಿತರು ಗ್ರಾಮದ ಇಬ್ಬರು ಮುಖಂಡರು, ಸಲೂನ್ ಶಾಪ್ ಮಾಲೀಕ ಹಾಗೂ ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತರದ ಪಿಡಿಒ ವಿರುದ್ಧ ದೂರು ದಾಖಲಿಸುವಂತೆ ಪಟ್ಟು ಹಿಡಿದರು. ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸದ್ಯ ಸಂಧಾನ ಸಭೆ ಸಫಲವಾಗಿದ್ದು, ಮುಂದೆ ಎರಡೂ ಸಮುದಾಯದವರು ಅನ್ಯೋನ್ಯವಾಗಿ ಬಾಳಲು ಸೂಚನೆ ನೀಡಲಾಯಿತು.