ಬೆಳಗಾವಿ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗಿದೆ. ಮಹಾರಾಷ್ಟ್ರದ ವಿಧಾನ ಮಂಡಲ ಬಜೆಟ್ ಅಧಿವೇಶನದಲ್ಲಿ ಗಡಿ ವಿವಾದದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಗಡಿ ವಿವಾದ ಸಂಬಂಧಿತ ಅರ್ಜಿಯನ್ನ ಸುಪ್ರೀಂಕೋರ್ಟ್‌ನಲ್ಲಿ ಶೀಘ್ರ ವಿಚಾರಣೆ ಆರಂಭಿಸುವಂತೆ ಮಾಡಲು ಯಾವೆಲ್ಲಾ ಕ್ರಮ ಕೈಗೊಳ್ಳಬೇಕು? ಎಂಬುದರ ಜೊತೆಗೆ ಕಾನೂನಿನ ತೊಡಕು ಸೇರಿ ಇತರ ತಾಂತ್ರಿಕ ಸಮಸ್ಯೆ ಬಗೆಹರಿಸಿ ಶೀಘ್ರ ವಿಚಾರಣೆಗೆ ಕೈಗೊಳ್ಳುವಂತೆ ಇಂದು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಉಭಯ ಸದನಗಳಲ್ಲಿ ಇಂದು ಒಮ್ಮತದ ನಿರ್ಣಯ ಕೈಗೊಳ್ಳಲಾಗುತ್ತಿದೆ. ಉಭಯ ಸದನದ ನಿರ್ಣಯವನ್ನು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ಗೆ ಕಳುಹಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ಸರ್ಕಾರದಿಂದ ಗಡಿ ಭಾಗದ ಮರಾಠಿಗರ ಮೇಲೆ ಅನ್ಯಾಯವಾಗುತ್ತಿದೆ ಎಂದು ಮಹಾ ಸರ್ಕಾರ ಆರೋಪಿಸಿದೆ. ಮಹಾರಾಷ್ಟ್ರ ಬಿಜೆಪಿ ನಾಯಕರು ಈ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಮಹಾರಾಷ್ಟ್ರದ ವಿಧಾನ ಪರಿಷತ್ನಲ್ಲಿ ಎಂಎಲ್ಸಿ ದಿವಾಕರ್ ರಾವತೆ ದೂರಿದ್ದಾರೆ.
ನಮ್ಮ ಸರ್ಕಾರವೂ ಎಚ್ಚೆತ್ತುಕೊಳ್ಳಲಿ: ಮಹಾರಾಷ್ಟ್ರದ ಉಭಯ ಸದನದಲ್ಲಿ ಗಡಿ ವಿವಾದ ಬಗ್ಗೆ ಚರ್ಚೆ ವಿಚಾರಕ್ಕೆ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಗಡಿ ವಿವಾದ ಕಳೆದ 17-18 ವರ್ಷಗಳಿಂದ ಸುಪ್ರೀಂಕೋರ್ಟ್‌ನಲ್ಲಿ ಪೆಂಡಿಂಗ್ ಇದೆ. ಪದೇ ಪದೆ ಮಹಾರಾಷ್ಟ್ರ ನಾಯಕರು ಗಡಿ ವಿವಾದ ಕೆದಕುತ್ತಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕರ್ನಾಟಕ ಸರ್ಕಾರ ಗಟ್ಟಿ ನಿರ್ಣಯ ಕೈಗೊಳ್ಳುವಲ್ಲಿ ವಿಫಲವಾಗಿದೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡು, ಮಹದಾಯಿ ವಿಚಾರದಲ್ಲಿ ಗೋವಾ, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಪದೇ ಪದೆ ಕ್ಯಾತೆ ತಗೆಯುತ್ತಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್‌ಡಿಕೆ ಸೇರಿ ಎಲ್ಲಾ ನಾಯಕರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಫೈಲ್ಸ್ ಎಂದು ವಿವಾದಾತ್ಮಕ ಪೋಸ್ಟ್.. ಸಂಜಯ್ ರಾವತ್ ಟ್ವೀಟ್ ವಿರುದ್ಧ ಭುಗಿಲೆದ್ದ ಆಕ್ರೋಶ!