ಬೆಳಗಾವಿ: ಫ್ಲೂ ಲಕ್ಷಣಗಳು ಹಾಗೂ ಕೋವಿಡ್-19 ರಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದಿರುವುದರಿಂದ ಸೋಂಕಿತರನ್ನು ಗುರುತಿಸುವುದು ಸವಾಲಿನ ಕೆಲಸವಾಗಿದೆ ಎಂದು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.
ನಗರದ ಬಿಮ್ಸ್ ಸಭಾಗಂಣದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳು, ಸಿದ್ಧತೆ, ಮುನ್ನೆಚ್ಚರಿಕೆ ಹಾಗೂ ಲಭ್ಯವಿರುವ ಚಿಕಿತ್ಸಾ ಕ್ರಮಗಳ ಕುರಿತು ಇಂದು ಹಮ್ಮಿಕೊಂಡ ಬಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿ ಗಣನೀಯ ಸಾಧನೆ ಕಂಡು ಬಂದಿದೆ. ಇನ್ನೂ ಹೆಚ್ಚು ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ಮಾಸ್ಕ್, ಸ್ಯಾನಿಟೈಜರ್ಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಳ್ಳುವ ಮೆಡಿಕಲ್ ಸ್ಟೋರ್ ಮತ್ತಿತರ ಮಳಿಗೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಆಸ್ಪತ್ರೆ ಮತ್ತು ಚೆಕ್ ಪೋಸ್ಟ್ ಗಳಲ್ಲಿ ನಿಗಾ ವಹಿಸಲು ಸಮರ್ಪಕ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಸೂಕ್ತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಬೇಕು. ವೈರಾಣು ಹರಡುವಿಕೆಯನ್ನು ತಡೆಗಟ್ಟಲು ವೈದ್ಯರೂ ಸೇರಿದಂತೆ ಎಲ್ಲರೂ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಆಸ್ಪತ್ರೆಗೆ ರೋಗಿಗಳ ಭೇಟಿಗೆ ಆಗಮಿಸುವವರನ್ನು ನಿರ್ಬಂಧಿಸಲು ಸೂಕ್ತ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮದುವೆ, ಇತರೆ ಸಭೆ ಸಮಾರಂಭಗಳು, ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ಕೂಡ ಕಟ್ಟುನಿಟ್ಟಾಗಿ ನಿರ್ಬಂಧಿಸುವಂತೆ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮಾತನಾಡಿ, ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತಿ ನೀಡಲಾಗಿದೆ. ಎಲ್ಲ ಇಲಾಖೆಯ ಸಮನ್ವಯ ಸಭೆ ನಡೆಸಲಾಗಿದ್ದು, ಮಾಹಿತಿ ಸಂಗ್ರಹ, ತುರ್ತು ಚಿಕಿತ್ಸೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.ಸಭೆಯಲ್ಲಿ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಬಿಮ್ಸ್ ನಿರ್ದೇಶಕ ಡಾ.ದಾಸ್ತಿಕೊಪ್ಪ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್., ಬಿಮ್ಸ್ ಮುಖ್ಯ ಲೆಕ್ಕಾಧಿಕಾರಿ ಸಯೀದಾ ಅಫ್ರೀನ್ ಬಾನು ಬಳ್ಳಾರಿ ಮತ್ತಿತರರು ಭಾಗವಹಿಸಿದ್ದರು.