ಬೆಳಗಾವಿ: ಕುಂದಾನಗರಿ ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿದ್ದರೂ ಬೀಮ್ಸ್ ಆಸ್ಪತ್ರೆ ಮಾತ್ರ ಅಗ್ನಿ ಸುರಕ್ಷತೆಗಳಿಲ್ಲದೆ ಬಳಲುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಬೀಮ್ಸ್ ಆಡಳಿತ ಮಂಡಳಿ ಅನ್ಯರನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಿದೆ. ವಿಪರ್ಯಾಸವೆಂದರೆ, 740 ಬೆಡ್ ವ್ಯವಸ್ಥೆ ಹೊಂದಿರುವ ಈ ಆಸ್ಪತ್ರೆಯಲ್ಲಿ ಅಗ್ನಿನಂದಕ ಸಿಲಿಂಡರ್ ಇರುವುದು ಕೇವಲ 40 ಮಾತ್ರ!
ವಿಸ್ತೀರ್ಣದಲ್ಲಿ ಬೆಂಗಳೂರು ನಂತರ ಅತಿದೊಡ್ಡ ಜಿಲ್ಲೆ ಎಂಬ ಕೀರ್ತಿಗೆ ಬೆಳಗಾವಿ ಪಾತ್ರವಾಗಿದೆ. ಅತಿಹೆಚ್ಚು ರಾಜಕೀಯ ಪ್ರಾತಿನಿಧ್ಯ ಜಿಲ್ಲೆಗೆ ಸಿಕ್ಕಿದೆ. ಓರ್ವ ಡಿಸಿಎಂ ಸೇರಿ ಬಿಜೆಪಿ ಸರ್ಕಾರದಲ್ಲಿ ನಾಲ್ವರು ಮಂತ್ರಿಗಳಿದ್ದಾರೆ. ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಕೂಡ ಬೆಳಗಾವಿಯನ್ನೇ ಪ್ರತಿನಿಧಿಸುತ್ತಾರೆ. ರಾಜಕೀಯವಾಗಿ ಇಷ್ಟೆಲ್ಲಾ ಅವಕಾಶ ಸಿಕ್ಕರೂ ಬೀಮ್ಸ್ ಆಸ್ಪತ್ರೆಗೆ ಮಾತ್ರ ಅಗ್ನಿಸುರಕ್ಷತೆ ಸಂಬಂಧ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲು ಈ ಭಾಗದ ಜನಪ್ರತಿನಿಧಿಗಳು ಸಾಧ್ಯವಾಗಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರುವ ಇಚ್ಛಾಶಕ್ತಿಯನ್ನು ರಾಜಕೀಯ ನಾಯಕರು ಮಾಡುತ್ತಿಲ್ಲ ಎಂಬುವುದೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ಯಾಧುನಿಕ ಸೌಲಭ್ಯ ವಂಚಿತವಾಗಿದ್ದೇಕೆ ಬೀಮ್ಸ್?:
ಜಿಲ್ಲಾಸ್ಪತ್ರೆಯನ್ನು 60 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. 740 ಬೆಡ್‍ಗಳನ್ನು ಹೊಂದಿರುವ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಕೀರ್ತಿಗೂ ಪಾತ್ರವಾಗಿದೆ. ಆದರೆ, ಇಲ್ಲಿ ಕೇವಲ 40 ಅಗ್ನಿನಂದಕ ಸಿಲಿಂಡರ್ಗಳಿವೆ. ಆಸ್ಪತ್ರೆ ನಿರ್ಮಿಸುವಾಗ ಅಗ್ನಿ ಸುರಕ್ಷತೆ ಸಂಬಂಧ ಯಾವುದೇ ಗಮನ ಹರಿಸಿಲ್ಲ. ಈ ಕಾರಣಕ್ಕೆ ಅದಕ್ಕೆ ಬೇಕಾದ ಅತ್ಯಾಧುನಿಕ ಸೌಲಭ್ಯ ನಿರ್ಮಿಸಲು ಇಲ್ಲಿ ಸಾಧ್ಯವಾಗಿಲ್ಲ.
ಅಗ್ನಿನಂದಕ ಸಿಲಿಂಡರ್ಗಳನ್ನು ಐಸಿಯು ವಾರ್ಡ್ನಲ್ಲಿ ಮಾತ್ರ ಇರಿಸಲಾಗಿದೆ. ಉಳಿದ ವಾರ್ಡ್‍ಗಳಲಿ ದುರಂತ ಸಂಭವಿಸಿದರೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿಯನ್ನು ಹತೋಟಿಗೆ ತರಬೇಕು. ಜಿಲ್ಲಾಸ್ಪತ್ರೆಯಿಂದ ಅಗ್ನಿಶಾಮಕ ದಳದ ಠಾಣೆ ಎರಡು ಕಿ.ಮೀ ದೂರವಿದ್ದು, ಅಲ್ಲಿಂದ ಇಲ್ಲಿಗೆ ಬರಲು ಕನಿಷ್ಠ 20 ನಿಮಿಷವಾದರೂ ಸಮಯ ಹಿಡಿಯುತ್ತದೆ. ದೊಡ್ಡ ಪ್ರಮಾಣದಲ್ಲಿ ಅವಘಡಗಳಾದರೆ ಜಿಲ್ಲಾಸ್ಪತ್ರೆಯಲ್ಲೂ ಅಹಮದಾಬಾದ್ ಘಟನೆ ಮರುಕಳಿಸುವುದರಲ್ಲಿ ಅನುಮಾನವೇ ಇಲ್ಲ. ಬೆಳಗಾವಿಯ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 56 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಅಗ್ನಿ ನಿಯಂತ್ರಣದ ಎಲ್ಲ ಬಗೆಯ ತರಬೇತಿ ಪಡೆದಿದ್ದಾರೆ.
ಪ್ರಸ್ತಾವನೆಗೆ ಸಿದ್ಧತೆ: ಈಟಿವಿ ಭಾರತ ಜತೆಗೆ ಮಾತನಾಡಿದ ಬೀಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, ಜಿಲ್ಲಾಸ್ಪತ್ರೆಯ ಕಟ್ಟಡ ಹಳೆಯದಾದ ಕಾರಣ ಅತ್ಯಾಧುನಿಕ ಅಗ್ನಿ ಸುರಕ್ಷತೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನಿತ್ಯ ಸಾವಿರಾರು ರೋಗಿಗಳು ಬರುವ ಜಿಲ್ಲಾಸ್ಪತ್ರೆಗೆ ಅದರ ಅವಶ್ಯಕತೆ ಇದೆ. ಈ ಸಂಬಂಧ ಅಗ್ನಿಶಾಮಕ ದಳದ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದೆ. ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದ್ದು, ಸರ್ಕಾರ ಒಪ್ಪಿಗೆ ಸೂಚಿಸಿದರೆ ಜಿಲ್ಲಾಸ್ಪತ್ರೆಯಲ್ಲಿ ಕೇಂದ್ರಿಯ ಅಗ್ನಿ ಸುರಕ್ಷತೆ ವ್ಯವಸ್ಥೆ ಅಳವಡಿಸಲಾಗುವುದು. ಆಗ ಅಗ್ನಿ ಅವಘಡ ಸಂಭವಿಸಿದರೂ ಯಾವುದೇ ಪ್ರಾಣ ಹಾಗೂ ಆಸ್ತಿ ಹಾನಿ ಆಗಲ್ಲ. ಈ ಬಗ್ಗೆ ತುರ್ತಾಗಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.