ಚಿಕ್ಕೋಡಿ(ಬೆಳಗಾವಿ): ಕರ್ನಾಟಕದಲ್ಲಿರುವ ಅಲ್ಪಸಂಖ್ಯಾತ ದಿಗಂಬರ ಜೈನ ಮಠಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸೊಂದಾ ಸ್ವಾದಿ ದಿಗಂಬರ ಜೈನ್ ಮಠದ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿ ಅವರು, ಜವಳಿ ಮತ್ತು ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲರಿಗೆ ಮನವಿ ಸಲ್ಲಿಸಿದರು.
ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿರುವ ಸಚಿವ ಶ್ರೀಮಂತ ಪಾಟೀಲ ಅವರ ಕಚೇರಿಗೆ ಆಗಮಿಸಿದ ಭಟ್ಟಾರಕ ಸ್ವಾಮೀಜಿ, ಜೈನ್ ಮಠಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕೊರೊನಾ ಲಾಕ್ಡೌನ್ನಿಂದಾಗಿ ಜೈನ್ ಮಠಗಳಿಗೆ ಆರ್ಥಿಕ ತೊಂದರೆಯುಂಟಾಗಿದೆ. ಹೀಗಾಗಿ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಒಂದೊಂದು ಮಠಕ್ಕೆ ಕನಿಷ್ಠ 3 ಕೋಟಿ ರೂ. ಅನುದಾನ ನೀಡಬೇಕೆಂದು ಕೇಳಿದ್ದೇವೆ. ಸಚಿವರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಜೈನ್ ಮಠಗಳಿಗೆ ಅನುದಾನ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀಮಂತ ಪಾಟೀಲ, ಜೈನ್ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಠದಲ್ಲಿ ಗೋಶಾಲೆ ಕೂಡ ನಡೆಸುತ್ತಿದ್ದಾರೆ. ಇವೆಲ್ಲವೂ ಸರಿಯಾಗಿ ನಡೆಯಬೇಕಾದ್ರೆ ಹಣದ ಅವಶ್ಯಕತೆ ಇದೆ. ಈಗಾಗಲೇ ಹಿಂದೂ ದೇವಾಲಯಗಳಿಗೆ ಸರ್ಕಾರ ಅನುದಾನ ನೀಡಿದೆ. ಇನ್ನೆರಡು ದಿನಗಳಲ್ಲಿ ಸಿಎಂ ಬಳಿ ಈ ಬಗ್ಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂದರು.