ಶಿವಮೊಗ್ಗ: ಎರಡು ದಿನದಿಂದ ಬೆಳಗಾವಿಯಲ್ಲಿ ಒಂದಷ್ಟು ಜನ ಪುಂಡತನ ಮೆರೆಯುತ್ತಿದ್ದಾರೆ. ಶಾಂತಿ ಕದಡುವ ಕೆಲಸ ಮಾಡುವ ಜೊತೆ ಸರ್ಕಾರಿ ವಾಹನಗಳನ್ನ ಜಖಂ ಮಾಡಿದ್ದಾರೆ. ಜೊತೆಗೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಮಾಡಿದ್ದಾರೆ.
ಈ ಬಗ್ಗೆ ನಾನು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಯಾರೇ ಆಗಿದ್ದರೂ ಅವರನ್ನು ವಶಕ್ಕೆ ಪಡೆದು ಬುದ್ಧಿ ಕಲಿಸಲು ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಗೃಹಸಚಿವರು ಪ್ರತಿಕ್ರಿಯೆ ನೀಡಿದರು. ಶಿವಾಜಿ ಹಾಗೂ ಸಂಗೊಳ್ಳಿ ರಾಯಣ್ಣ ಇಬ್ಬರೂ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ದೊಡ್ಡ ವ್ಯಕ್ತಿಗಳು. ಇಂಥ ದೊಡ್ಡ ವ್ಯಕ್ತಿಗಳನ್ನು ರಾಜಕಾರಣಕ್ಕೆ ಬಳಕೆ ಮಾಡುವವರನ್ನು ಕ್ಷಮಿಸಲು ಸಾಧ್ಯವಿಲ್ಲ. ಮಹಾನ್ ನಾಯಕರ ಪ್ರತಿಮೆ ಧ್ವಂಸ ಮಾಡಿದಾಕ್ಷಣ ಅವರ ಆಚಾರ, ವಿಚಾರಗಳು ಹಾಳಾಗುವುದಿಲ್ಲ ಎಂದರು.
(ಇದನ್ನೂ ಓದಿ: ಹೋಟೆಲ್, ಬ್ಯಾಂಕ್ ಮೇಲೂ ಕಲ್ಲು ತೂರಿದ ಕಿಡಿಗೇಡಿಗಳು.. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ)
ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಶಾಂತಿಯಿಂದ ಇದ್ದಾರೆ. ಆದರೆ, ಕೆಲ ದುಷ್ಕರ್ಮಿಗಳು ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಆತಂಕಕ್ಕೊಳಗಾಗುವುದು ಬೇಡ ಎಂದು ಗೃಹ ಸಚಿವರು ಮನವಿ ಮಾಡಿದರು.
ಬೆಂಗಳೂರಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಹಾಕಿದ ಬಳಿಕ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪೊಲೀಸರು ಈಗಾಗಲೇ ಕೆಲ ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದಾರೆ.
(ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಜ್ಯದ ಬಸ್, ಕನ್ನಡಿಗರ ವಾಹನಗಳ ಮೇಲೆ ಶಿವಸೇನೆ ಕಲ್ಲು ತೂರಾಟ - ವಿಡಿಯೋ)