ಅಥಣಿ (ಬೆಳಗಾವಿ): ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಪ್ರಾರಂಭವಾದಾಗಿನಿಂದಲೂ ಭಾರತದ ವಿದ್ಯಾರ್ಥಿಗಳು ಪ್ರತಿಕ್ಷಣವು ಪರದಾಡುವಂತಾಗಿದೆ. ಉಕ್ರೇನ್ ಸ್ಥಳೀಯ ಆಡಳಿತ ವ್ಯವಸ್ಥೆ ಇದನ್ನೇ ಬಂಡವಾಳ ಮಾಡಿಕೊಂಡು ನಮ್ಮ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿಕೊಂಡು, ಲಂಚ ಪಡೆದು ರೈಲು ಹತ್ತಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ ಗ್ರಾಮದ ರಾಕೇಶ್ ಪೂಜಾರಿ, ನಾಗೇಶ್ ಪೂಜಾರಿ ಎಂಬ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿಂದ ಪಾರಾಗಿ ಬರಲು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಉಕ್ರೇನ್ ದೇಶದ ಖಾರ್ಕೀವ್ ನಗರದಿಂದ ಪಾರಾಗಿ ಮುಂದೆ ಬಂದಿದ್ದು, ಇದರ ನಡುವೆ ಸ್ಥಳಿಯ ಆಡಳಿತ ವ್ಯವಸ್ಥೆ ಮಕ್ಕಳ ಜೊತೆ ಕೆಲಸ ಮಾಡಿಸಿಕೊಂಡು ಬಳಿಕ ಲಂಚದ ರೂಪದಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದುಕೊಂಡು ಪೋಲೆಂಡ್ ನಗರಕ್ಕೆ ಕಳುಹಿಸಿ ಕೊಡುತ್ತಿದ್ದಾರೆ ಎಂದು ರಾಕೇಶ್, ನಾಗೇಶ್ ಪೂಜಾರಿ ಪಾಲಕರು ಆತಂಕಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ಉಕ್ರೇನ್ನಲ್ಲಿ ತಮ್ಮ ಮಕ್ಕಳು ತೀವ್ರ ಕಿರುಕುಳವನ್ನು ಅನುಭವಿಸುತ್ತಿದ್ದಾರೆ'- ಪೋಷಕರ ಆತಂಕ
ನಮ್ಮ ದೇಶದ ಇನ್ನೂ ಅನೇಕ ವಿದ್ಯಾರ್ಥಿಗಳು ಖಾರ್ಕೀವ್ ನಗರದಲ್ಲಿ ಸಿಲುಕಿಕೊಂಡಿದ್ದಾರೆ. ಪೋಲೆಂಡ್ ನಗರದಲ್ಲಿ ವಿಮಾನ ವ್ಯವಸ್ಥೆ ಇಲ್ಲದೇ ಇರುವುದರಿಂದ ಕಳೆದ 2 ದಿನಗಳಿಂದ ಮಕ್ಕಳು ಅಲ್ಲೇ ಕಾಯುತ್ತಿದ್ದಾರೆ. ಆದಷ್ಟು ಬೇಗನೆ ಮಕ್ಕಳನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನ ಮಾಡಲಿ ಎಂದು ಮಹಾದೇವ ಪೂಜಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.