ಬೆಳಗಾವಿ: ನಾಡಿನಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಠಮಿ ಸಡಗರ ಮನೆ ಮಾಡಿದೆ. ಎಲ್ಲೆಡೆ ಹಿಂದೂಗಳು ನಮ್ಮ ಪುಟ್ಟ ಮನೆ ಮಕ್ಕಳಿಗೆ ಕೃಷ್ಣನ ವೇಷಭೂಷಣ ತೊಡಿಸಿ ಸಂಭ್ರಮಿಸುತ್ತಿದ್ದಾರೆ. ಮತ್ತೆ ಕೆಲವರು ಕೃಷ್ಣನೊಂದಿಗೆ ರಾಧಾ ಹಾಗೂ ತಾಯಿ ದೇವಕಿಯ ವೇಷವನ್ನೂ ಮಕ್ಕಳಿಗೆ ಹಾಕಿಸಿ ಜನ್ಮಾಷ್ಠಮಿ ಆಚರಣೆ ಮಾಡುತ್ತಿದ್ದಾರೆ.
ಆದರೆ, ಗೋಕುಲಾಷ್ಠಮಿ ಅಂಗವಾಗಿ ಬೆಳಗಾವಿ ಮುಸ್ಲಿಂ ಕುಟುಂಬವೊಂದು ಕೂಡ ತಮ್ಮ ಮುದ್ದಿನ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ಹಾಕಿ ಗಮನ ಸಳೆದರು. ಇಲ್ಲಿನ ಸದಾಶಿವ ನಗರದ ದಸ್ತಗೀರ್ ಮೊಕಾಶಿ ಎಂಬುವವರ ಕುಟುಂಬ ತಮ್ಮ ಮೊಮ್ಮಗ ಅದ್ವಾನ್ ಆಸೀಪ್ ಮೊಕಾಶಿಗೆ ಕೃಷ್ಣನ ವೇಷಭೂಷಣ ಹಾಕಿಸಿ ಖುಷಿಪಟ್ಟರು.
ನಗರದ ಲವ್ ಡೆಲ್ ಶಾಲೆಯಲ್ಲಿ ಆಸೀಪ್ ಎಲ್ಕೆಜಿ ಓದುತ್ತಿದ್ದಾನೆ. ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶಿಕ್ಷಕರು ವೇಷಭೂಷಣ ಸ್ಪರ್ಧೆ ಆಯೋಜಿಸಿದ್ದು, ಈ ಬಾಲಕನಿಗೂ ಕೃಷ್ಣನ ಪೋಷಾಕು ಧರಿಸಿಕೊಂಡು ಬರುವಂತೆ ಹೇಳಿದ್ದರು. ಅಂತೆಯೇ ಮೊಕಾಶಿ ಕುಟುಂಬದವರು ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ಹಾಕಿಸಿ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಸ್ತಗೀರ್‌ಸಾಬ್ ಮೊಕಾಶಿ, "ಹಿಂದೂ-ಮುಸ್ಲಿಂ ಎಲ್ಲರೂ ಭಾವೈಕ್ಯತೆಯಿಂದ ಇರುವ ರಾಷ್ಟ್ರ ನಮ್ಮದು. ಎಲ್ಲ ಧರ್ಮಗಳನ್ನೂ ಒಳಗೊಂಡಿರುವ ದೇಶ ಭಾರತ. ಎಲ್ಲ ಧರ್ಮಗಳಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ" ಎಂದರು.
ಮುಂದುವರೆದು ಮಾತನಾಡಿ, "ಗೋಕುಲಾಷ್ಠಮಿ ನಿಮಿತ್ತ ಶಾಲೆಯ ಶಿಕ್ಷಕರು ನಮ್ಮ ಮೊಮ್ಮಗ ಅದ್ವಾನ್ ಆಸೀಪ್‌ಗೆ ಕೃಷ್ಣ ವೇಷ ಹಾಕಿಸುವಂತೆ ಹೇಳಿದ್ದರು. ಹೀಗಾಗಿಯೇ ನಾನು, ಅಜ್ಜಿ, ಅಮ್ಮ ಹಾಗೂ ಎಲ್ಲರೂ ಕೂಡಿಕೊಂಡು ಕೃಷ್ಣನ ವೇಷಭೂಷಣ ತೊಡಿಸಿದ್ದೇವೆ. ನಾವು ಮೊದಲಿನಿಂದಲೂ ರಾಮನವಮಿ ಸೇರಿದಂತೆ ಎಲ್ಲ ಹಬ್ಬಗಳಲ್ಲಿಯೂ ಭಾಗಿಯಾಗುತ್ತೇವೆ. ಈ ಹಿಂದೆಯೂ ಕೂಡಾ ನಮ್ಮ ಮಕ್ಕಳಿಗೆ ವೇಷಗಳನ್ನು ಹಾಕಿಸಿದ್ದೇವೆ. ರಾಮನ ವೇಷವನ್ನೂ ಮಕ್ಕಳು ಹಾಕಿದ್ದಾರೆ. ಹಿಂದೂ-ಮುಸ್ಲಿಂ ಅಂತಾ ಭೇದ-ಭಾವ ಏನೂ ಇಲ್ಲ. ರಾಮ್, ರಹೀಮ್ ಎಲ್ಲರೂ ಒಂದೇ" ಎಂದು ದಸ್ತಗೀರ್‌ಸಾಬ್ ಮೊಕಾಶಿ ತಿಳಿಸಿದರು.
ಇದನ್ನೂ ಓದಿ: ವಿಡಿಯೋ: ಶ್ರೀಕೃಷ್ಣನಿಗೆ ಚಿನ್ನಾಭರಣದ ಉಯ್ಯಾಲೆ ನೀಡಿದ ಭಕ್ತ