ಅಥಣಿ(ಬೆಳಗಾವಿ) : ತಾಲೂಕಿನಲ್ಲಿ ಕಳೆದ 5 ತಿಂಗಳ ಹಿಂದೆ ಕೃಷ್ಣಾ ನದಿ ಪ್ರವಾಹದಿಂದ ಸಂಪೂರ್ಣ ಹಾಳಾಗಿದ್ದ ಬೆಳೆಗಳಿಗೆ ಸರ್ಕಾರ ಅಲ್ಪ ಪ್ರಮಾಣದ ಪರಿಹಾರ ನೀಡಿದ ಸರ್ಕಾರ ವಿರುದ್ಧ ರೈತರು ಆಕ್ರೋಶ(Farmer's outrage against state government)ವ್ಯಕ್ತಪಡಿಸಿದ್ದಾರೆ.
1 ಎಕರೆ ಜಮೀನಿನಲ್ಲಿ ಬೆಳೆದ 2 ಲಕ್ಷ ರೂಪಾಯಿ ಮೌಲ್ಯದ ಕಬ್ಬು ಬೆಳೆ ಹಾನಿಗೆ ಸರ್ಕಾರ 5400 ರೂಪಾಯಿ ಪರಿಹಾರವನ್ನು ಮಾತ್ರ ನೀಡಿದೆ. 2 ಲಕ್ಷ ರೂಪಾಯಿ ಮೌಲ್ಯದ ಕಬ್ಬು ಸಂಪೂರ್ಣ ಹಾನಿಯಾದರೂ ಸರ್ಕಾರ ಮಾತ್ರ ಅಲ್ಪ ಪ್ರಮಾಣದ ಪರಿಹಾರ ಹಣ ಬಿಡುಗಡೆ ಮಾಡಿ ಕೈತೊಳೆದುಕೊಂಡಿದೆ. ಸರ್ಕಾರ ಈ ಭಾಗದ ರೈತರನ್ನು ಮಲತಾಯಿ ಧೋರಣೆಯಿಂದ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
2019ರಲ್ಲಿ ಪ್ರವಾಹ ಎದುರಾದಾಗ ಪ್ರತಿ ಎಕರೆಗೆ 9600 ರೂಪಾಯಿ ಬೆಳೆ ಪರಿಹಾರ ನೀಡಲಾಗಿತ್ತು. ಆದರೆ, ಈ ಬಾರಿ ವರ್ಷದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಹಾನಿಯಾದ ಪ್ರತಿ ಎಕರೆ ಬೆಳೆಗೆ 5,400 ರೂಪಾಯಿ ಮಾತ್ರ ನೀಡಿದೆ. ರೈತರಿಗೆ ಬೊಮ್ಮಾಯಿ ಸರ್ಕಾರ ಭಿಕ್ಷೆ ಕೊಟ್ಟಂತಿದೆ ಎಂದು ರೈತರು ಹರಿಹಾಯ್ದಿದ್ದಾರೆ.
ಮನೆ ಹಾನಿ ಪರಿಹಾರವೇ ನೀಡಿಲ್ಲ : ಪ್ರವಾಹದಲ್ಲಿ ನೀರು ನುಗ್ಗಿ ಹಾನಿಯಾದ ಮನೆಗಳಿಗೆ ತುರ್ತು 10 ಸಾವಿರ ರೂಪಾಯಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಇದುವರೆವಿಗೂ ಪರಿಹಾರ ನೀಡದೇ ಘೋಷಣೆಯಾಗಿಯೇ ಉಳಿದಿದೆ. ಕೆಲ ರೈತರಿಗೆ ಮಾತ್ರ ಬೆಳೆ ಪರಿಹಾರ ಹಣ ಬಂದಿದೆ. ಇನ್ನುಳಿದ ರೈತರಿಗೆ ಏಕೆ ಪರಿಹಾರ ನೀಡಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬೆಳೆ ಹಾನಿ ಪರಿಹಾರದ ವಿಷಯದಲ್ಲಿ ಸರ್ಕಾರ ಹೇಳುವುದೊಂದು, ಮಾಡುವುದೊಂದು ಎಂಬಂತಾಗಿದೆ. ಎಕರೆಗೆ 13,400 ರೂಪಾಯಿ ಬೆಳೆ ಪರಿಹಾರ ಕೊಡಲಾಗುವುದು ಎಂದು ಘೋಷಿಸಿ, ಈಗ 5,400 ರೂಪಾಯಿ ನೀಡಿದ್ದಾರೆ.
ಇದರಲ್ಲಿ ಅಧಿಕಾರಿಗಳು ಹಣ ಲೂಟಿ ಮಾಡಿದ್ದಾರೆ ಎಂಬ ಅನುಮಾನವಿದೆ ಎಂದು ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡುವಂತೆ ಕೃಷ್ಣಾ ನದಿ ತೀರದ ರೈತರು ಒತ್ತಾಯಿಸಿದ್ದಾರೆ.