ಬೆಳಗಾವಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ಹಾಗೂ ಹೊಸ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಬೆಳಗಾವಿ ರಾಜಕಾರಣಿಗಳು ಐದು ದಶಕಗಳಿಂದ ಮಹತ್ವದ ಪಾತ್ರನಿರ್ವಹಿಸುತ್ತಲೇ ಬಂದಿದ್ದಾರೆ. ಹೀಗಾಗಿ, ರಾಜ್ಯ ಹಾಗೂ ದೇಶದ ರಾಜಕಾರಣದ ಭೂಪಟದಲ್ಲಿ ಕುಂದಾನಗರಿಗೆ ಮಹತ್ವದ ಸ್ಥಾನವಿದೆ. ಈ ಕಾರಣಕ್ಕೆ ಸ್ಥಾನಮಾನದ ಹಂಚಿಕೆ ವಿಚಾರದಲ್ಲಿಯೂ ಬೆಳಗಾವಿಗೆ ಸಿಂಹಪಾಲು ಸಿಗುತ್ತಲೇ ಬಂದಿದೆ.
ಕೇಂದ್ರದ ಮೂರು ಪ್ರಧಾನಿಗಳ ಸಂಪುಟದಲ್ಲಿ ಸಚಿವರಾಗಿದ್ದ ದಿ.ಬಿ.ಶಂಕರಾನಂದ, ರಾಜ್ಯ ರಾಜಕಾರಣದಲ್ಲಿ ರಾಯಭಾಗ ಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಮಾಜಿ ಸಚಿವ ದಿ.ವಸಂತಕುಮಾರ ಪಾಟೀಲರಂಥ ನಾಯಕರನ್ನು ರಾಜ್ಯ ಹಾಗೂ ದೇಶಕ್ಕೆ ನೀಡಿದ ಕೀರ್ತಿ ಬೆಳಗಾವಿಯದ್ದು. ಇನ್ನು ವರ್ಣರಂಜಿತ, ಅಂದುಕೊಂಡಿದ್ದನ್ನು ಸಾಧಿಸುವ ಮನೋಭಾವದ ರಾಜಕಾರಣಿಗಳು ಈಗಲೂ ಇದ್ದಾರೆ. ಜಿಲ್ಲೆಯ ಈ ನಾಯಕರು ಈಗಲೂ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಪೊಲಿಟಿಕಲ್ ಗೇಮ್ ಪ್ಲೇ ಮಾಡುತ್ತಿದ್ದಾರೆ.
ಮೂರು ತಲೆಮಾರುಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ಕತ್ತಿ ಕುಟುಂಬ ಹಾಗೂ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಜಾರಕಿಹೊಳಿ ಕುಟುಂಬ, ಸವದಿ ಹಾಗೂ ಕೋರೆ ಕುಟುಂಬ ಬೆಳಗಾವಿ ರಾಜಕಾರಣದಲ್ಲಿ ಹಿಡಿತ ಹೊಂದಿದ್ದಾರೆ. ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಪ್ರಭಾವಳಿ ನೆಚ್ಚಿಕೊಂಡೆ ರಾಜಕೀಯ ಮಾಡುವ ನಾಯಕರಿಗೆ ಕೊರತೆ ಇಲ್ಲ. ಪಕ್ಷ ಯಾವುದೇ ಇದ್ದರೂ ಗೆದ್ದು ಬರುವ ತಾಕತ್ತನ್ನು ಜಿಲ್ಲೆಯ ಕೆಲ ನಾಯಕರು ಹೊಂದಿದ್ದೇ ರಾಜ್ಯ ರಾಜಕಾರಣದಲ್ಲಿ ವರ್ಚಸ್ಸು ಹೊಂದಲು ಮುಖ್ಯಕಾರಣ ಎನ್ನಲಾಗುತ್ತಿದೆ.
ಬೆಳಗಾವಿಯಿಂದಲೇ ಎರಡು ಸರ್ಕಾರಗಳ ಪತನ!: 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ಇದರ ನೇತೃತ್ವ ವಹಿಸಿದ್ದರು. ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅತೃಪ್ತರನ್ನು ಸೆಳೆದು ಮೈತ್ರಿ ಸರ್ಕಾರವನ್ನು ಉರಳಿಸಿದ್ದು, ಎಚ್‍ಡಿಕೆ ಖುರ್ಚಿ ತ್ಯಜಿಸಿದ್ದು ಹಾಗೂ ಯಡಿಯೂರಪ್ಪ ಅವರು ನಾಲ್ಕನೇ ಅವಧಿಗೆ ಸಿಎಂ ಹುದ್ದೆಗೇರಿ ರಾಜ್ಯಭಾರ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ.
ಆದರೆ ಇಂಥಹದೇ ಭಂಡಾಯದ ರಾಜಕಾರಣ 1970ರಲ್ಲೂ ಸದ್ದು ಮಾಡಿತ್ತು. ಅಂದು ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲ ವಿರುದ್ಧ ಬೆಳಗಾವಿಯ ರಾಯಭಾಗ ಕ್ಷೇತ್ರದ ಶಾಸಕರಾಗಿದ್ದ ವಸಂತರಾವ್ ಪಾಟೀಲ ಕೂಡ ಬಂಡೆದಿದ್ದರು. ಆಗಲೂ ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ ವಸಂತರಾವ್ ಪಾಟೀಲ ಯಶಸ್ವಿಯಾಗಿದ್ದರು. ವೀರೇಂದ್ರ ಪಾಟೀಲ ಸರ್ಕಾರ ಬಹುಮತ ಕಳೆದುಕೊಂಡಾಗ ತಾವಾಗಿಯೇ ರಾಜೀನಾಮೆ ನೀಡಿ ನಿರ್ಗಮಿಸಿದ್ದರು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ದೇವರಾಜು ಅರಸು ಸರ್ಕಾರ ಅಸ್ತಿತ್ವಕ್ಕೆ ಬಂದಿತು.
ಈ ಸರ್ಕಾರದ ರಚನೆಯಲ್ಲಿ ವಸಂತರಾವ್ ಪಾಟೀಲ ಪಾತ್ರವೂ ಮುಖ್ಯವಾಗಿತ್ತು. ಈ ಕಾರಣಕ್ಕೆ ಅಂದು ವಸಂತರಾವ್ ಪಾಟೀಲ ದೇವರಾಜ್ ಅರಸು ಕ್ಯಾಬಿನೆಟ್‍ನಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ 2008ರಲ್ಲಿ ಪಕ್ಷೇತರ ಶಾಸಕರ ಬೆಂಬಲದಿಂದ ಸರ್ಕಾರ ರಚಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರ ನೆರವಿಗೆ ಬಂದಿದ್ದು ಕೂಡ ಬೆಳಗಾವಿ ರಾಜಕಾರಣಿಗಳೇ. ಅಂದು ಜೆಡಿಎಸ್‍ನಲ್ಲಿದ್ದ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ರಾಜೀನಾಮೆ ನೀಡಿ ನಂತರ ಉಪಚುನಾವಣೆ ಗೆದ್ದು ಯಡಿಯೂರಪ್ಪ ಅವರ ಸಂಪುಟದಲ್ಲಿಯೂ ಸಚಿವರಾಗಿದ್ದರು.
ಯಡಿಯೂರಪ್ಪ ಸರ್ಕಾರದಲ್ಲಿ ಬೆಳಗಾವಿಗೆ ಬಂಪರ್: ಈ ಹಿಂದೆ ಗುಂಡೂರಾವ್ ಸರ್ಕಾರದಲ್ಲಿಯೂ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿತ್ತು. ಗುಂಡೂರಾವ್ ಸರ್ಕಾರದಲ್ಲಿ ಎ.ಬಿ.ಜಕನೂರು, ಡಿ.ಬಿ.ಪವಾರ್ ದೇಸಾಯಿ ಹಾಗೂ ಆರ್.ಎಸ್.ಪಾಟೀಲ ಸಚಿವರಾಗಿದ್ದರು. 1996ರಲ್ಲಿ ಜೆ.ಎಚ್.ಪಾಟೀಲ ಸರ್ಕಾರದಲ್ಲಿಯೂ ಉಮೇಶ ಕತ್ತಿ, ಎ.ಬಿ.ಪಾಟೀಲ ಹಾಗೂ ಲೀಲಾದೇವಿ ಪ್ರಸಾದ್ ಸಚಿವರಾಗಿದ್ದೇ ದಾಖಲೆಯಾಗಿತ್ತು. ಇದೀಗ ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ (ಡಿಸಿಎಂ ಹಾಗೂ ಸಾರಿಗೆ), ರಮೇಶ ಜಾರಕಿಹೊಳಿ (ಜಲಸಂಪನ್ಮೂಲ), ಉಮೇಶ ಕತ್ತಿ (ಖಾತೆ ಹಂಚಿಕೆಯಾಗಿಲ್ಲ), ಶಶಿಕಲಾ ಜೊಲ್ಲೆ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ) ಹಾಗೂ ಶ್ರೀಮಂತ ಪಾಟೀಲ (ಜವಳಿ) ಸಚಿವರಾಗಿದ್ದಾರೆ.
ಅಲ್ಲದೇ, ನಿಗಮ ಮಂಡಳಿಯಲ್ಲೂ ಜಿಲ್ಲೆಗೆ ಸಿಂಹಪಾಲು ಸಿಕ್ಕಿದೆ. ಕುಡಚಿ ಶಾಸಕ ಪಿ.ರಾಜೀವ್ (ತಾಂಡಾ ಅಭಿವೃದ್ಧಿ) ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ (ಕೊಳಗೇರಿ ಅಭಿವೃದ್ಧಿ ಮಂಡಳಿ) ರಾಯಭಾಗ ಶಾಸಕ ದುರ್ಯೋಧನ ಐಹೊಳೆ (ಆದಿ ಜಾಂಬವ), ಇನ್ನು ಮುಖ್ಯಮಂತ್ರಿ ಆಪ್ತ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲರಿಗೆ (ಕಾಡಾ), ಗೂಳಪ್ಪ ಹೊಸಮನಿಗೆ (ಬುಡಾ) ಅಧ್ಯಕ್ಷ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಅವರ ಅತ್ಯಾಪ್ತ ಶಂಕರಗೌಡ ಪಾಟೀಲಗೆ (ದೆಹಲಿ ವಿಶೇಷ ಪ್ರತಿನಿಧಿ), ಸವದತ್ತಿ ಶಾಸಕ ಆನಂದ ಮಾಮನಿಗೆ (ಉಪಸಭಾಪತಿ) ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ (ಕೆಎಂಎಫ್ ಅಧ್ಯಕ್ಷ ಸ್ಥಾನ) ಮಹಾಂತೇಶ ಕವಟಗಿಮಠ ಅವರಿಗೆ (ಪರಿಷತ್ ಸರ್ಕಾರದ ಮುಖ್ಯಸಚೇತಕ) ಜವಾಬ್ದಾರಿ ನೀಡಲಾಗಿದೆ.