ಬೆಳಗಾವಿ: ಡಿಸಿಸಿ ಬ್ಯಾಂಕಿನಲ್ಲಿ ಪ್ರಾಬಲ್ಯ ಸಾಧಿಸಲು ಬೆಳಗಾವಿ ಬಿಜೆಪಿ ನಾಯಕರ ಮಧ್ಯೆ ಪೈಪೋಟಿ ತೀವ್ರಗೊಂಡಿವೆ. ಎರಡು ವಾರಗಳ ಹಿಂದೆ ಬ್ಯಾಂಕಿನ ನಿರ್ದೇಶಕರ ಚುನಾವಣೆ ವೇಳೆ ಒಂದಾಗಿದ್ದ ಜಿಲ್ಲೆಯ ನಾಯಕರು ಇದೀಗ ನಾಳೆ ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಭಿನ್ನರಾಗ ಹಾಡುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಕತ್ತಿ ಸಹೋದರರು ಹಾಗೂ ಜಾರಕಿಹೊಳಿ ಸಹೋದರರು ಅನುಸರಿಸುತ್ತಿರುವ ನಿಗೂಢ ನಡೆ ಈ ಬೆಳವಣಿಗೆಗೆ ಪುಷ್ಠಿ ನೀಡಿದೆ.
ಬ್ಯಾಂಕಿನ ಅಧಿಕಾರ ಹಿಡಿಯಲು ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬೇಡಿ ಎಂದು ಬಿಜೆಪಿ ವರಿಷ್ಠರು ಹಾಗೂ ಆರ್‌ಎಸ್‍ಎಸ್ ನಾಯಕರು ಮೊದಲೇ ಖಡಕ್ ಸೂಚನೆ ನೀಡಿದ್ದರು. ಬಿಜೆಪಿ ವರಿಷ್ಠರ ಸೂಚನೆಗೆ ಮಣಿದು ಹಾವು-ಮುಂಗೂಸಿಯಂತಿದ್ದ ನಾಯಕರು ಒಂದಾಗಿದ್ದರು. ಎರಡು ವಾರಗಳ ಹಿಂದೆ ನಡೆದ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಒಂದಾಗಿ ಎದುರಿಸಿದ್ದ ನಾಯಕರು 13 ಸ್ಥಾನಗಳನ್ನು ಅವಿರೋಧ ಆಯ್ಕೆ ಮಾಡುವಲ್ಲಿ ಸಫಲರಾಗಿದ್ದರು.
ಬಳಿಕ ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ಕುಳಿತು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿ, ನಮ್ಮಲ್ಲಿರುವ ವೈಮನಸ್ಸು, ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೇವೆ. 20 ವರ್ಷಗಳ ಕಾಲ ಒಂದಾಗಿಯೇ ಇರುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿ ಎರಡೇ ವಾರಕ್ಕೆ ನಾಯಕರ ಮಧ್ಯೆ ಭಿನ್ನರಾಗ ಶುರುವಾಗಿದ್ದು, ಮತ್ತೇ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ನಾಯಕರ ನಿಗೂಢ ನಡೆ
ಜಿಲ್ಲಾ ರಾಜಕಾರಣದಲ್ಲಿ ಕತ್ತಿ, ಸವದಿ ಹಾಗೂ ಜಾರಕಿಹೊಳಿ ಕುಟುಂಬ ತನ್ನದೇ ಪ್ರಭಾವ ಹೊಂದಿದೆ. ಬಿಡಿಸಿಸಿ ಹಾಲಿ ಅಧ್ಯಕ್ಷ ರಮೇಶ ಕತ್ತಿ ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಹೋದರನಿಗೆ ಪಟ್ಟ ಕಟ್ಟಲು ಶಾಸಕ ಉಮೇಶ ಕತ್ತಿ ತಂತ್ರ ಹೆಣೆಯುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಕೂಡ ತಮ್ಮ ಆಪ್ತ ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರಿಗೆ ಪಟ್ಟ ಕಟ್ಟಲು ಯತ್ನಿಸುತ್ತಿದ್ದಾರೆ.
ಮತ್ತೊಂದೆಡೆ ಜಾರಕಿಹೊಳಿ ಸಹೋದರರು ಸುಭಾಷ ಡವಳೇಶ್ವರ ಅವರನ್ನು ಅಧ್ಯಕ್ಷರನ್ನಾಗಿಸಲು ಮುಂದಾಗಿದ್ದಾರೆ. ಸವದಿ, ಕತ್ತಿ ಹಾಗೂ ಜಾರಕಿಹೊಳಿ ಕುಟುಂಬ ಸದಸ್ಯರು ಬಲಾಢ್ಯರೇ ಆಗಿದ್ದು, ಚುಕ್ಕಾಣಿಗಾಗಿ ಒಳಒಳಗೆ ತಂತ್ರ ಹೆಣೆಯುತ್ತಿದ್ದಾರೆ. ಇದಕ್ಕಾಗಿ ಈ ಮೂವರು ನಾಯಕರ ನಿಗೂಢ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಕುತೂಹಲ ಮೂಡಿಸಿದ ಕತ್ತಿ ನಡೆ..!
ಕಳೆದ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಬೆಂಬಲದಿಂದ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿದಿದ್ದರು. ಆಗ ರಮೇಶ ಕತ್ತಿ ಎದುರಾಳಿಯಾಗಿದ್ದ ಲಕ್ಷ್ಮಣ ಸವದಿ ಕೊನೆ ಕ್ಷಣದಲ್ಲಿ ಸೋಲನುಭವಿಸಿದ್ದರು. ಆದರೆ, ಇದೀಗ ಬ್ಯಾಂಕ್ ಗದ್ದುಗೆಗಾಗಿ ಕತ್ತಿ ಸಹೋದರರು ಹಾಗೂ ಜಾರಕಿಹೊಳಿ ಸಹೋದರರ ಮಧ್ಯೆ ಮನಸ್ತಾಪ ಉಂಟಾಗಿದ್ದು, ಕತ್ತಿ ಸಹೋದರರು ಜಾಣ ನಡೆ ಅನುಸರಿಸುತ್ತಿದ್ದಾರೆ.
ನಿನ್ನೆ ಅಥಣಿಗೆ ತೆರಳಿದ ಕತ್ತಿ ಸಹೋದರರು ಡಿಸಿಎಂ ಲಕ್ಷ್ಮಣ ಸವದಿ ಜತೆಗೆ ಗೌಪ್ಯ ಸಭೆ ನಡೆಸಿದ್ದರು. ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ನಡೆದ ಈ ಸಭೆ ಕುತೂಹಲ ಕೆರಳಿಸಿತ್ತು. ಕತ್ತಿ ಸಹೋದರರಿಗೆ ಜಾರಕಿಹೊಳಿ ಸಹೋದರರು ಕೈಕೊಟ್ರಾ ಎಂಬ ಪ್ರಶ್ನೆಗೆ ನಿನ್ನೆ ನಡೆದ ಬೆಳವಣಿಗೆ ಪುಷ್ಠಿ ನೀಡುವಂತಿದೆ. ಇತ್ತ ಕತ್ತಿ ಸಹೋದರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಡಿಸಿಎಂ ಲಕ್ಷ್ಮಣ ಸವದಿ ಕೂಡ ಜಿಲ್ಲಾ ರಾಜಕಾರಣದಲ್ಲಿ ಮತ್ತಷ್ಟು ಬಲಾಢ್ಯರೆನಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಆದರೆ, ಇದೀಗ ಮೂವರು ಬಲಿಷ್ಠ ನಾಯಕರು ನಿಗೂಢ ನಡೆ ಅನುಸರಿಸುತ್ತಿದ್ದು, 16 ನಿರ್ದೇಶಕರು ಯಾವ ನಾಯಕನಿಗೆ ಜೈ ಎನ್ನಲಿದ್ದಾರೆ ಎಂಬುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನಾಳೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಬಿಜೆಪಿ ವರಿಷ್ಠರು ಮಧ್ಯಪ್ರವೇಶಿಸದಿದ್ರೆ ಮತ್ತೊಂದು ಬೆಳಗಾವಿಯ ಬ್ಯಾಂಕ್ ಚುನಾವಣೆ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.