ಬೆಳಗಾವಿ: ಮೆದುಳು ಜ್ವರದಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮೂಲದ ಬಾಲಕನನ್ನು ಬೆಳಗಾವಿ ಜಿಲ್ಲೆಯ ನಂದಗಡ ಗ್ರಾಮದಿಂದ ಬೆಳಗಾವಿಯ ಯಶ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಂದು ಆಸ್ಪತ್ರೆಗೆ ಡಿಹೆಚ್ಓ ಡಾ. ಮಹೇಶ್ ಕೋಣಿ ಭೇಟಿ ನೀಡಿ ಬಾಲಕ ಶೈಲೇಶ್ನ ಆರೋಗ್ಯವನ್ನು ವಿಚಾರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಹೆಚ್ಓ, ಐದು ತಿಂಗಳ ಹಿಂದೆ ಬಾಲಕ ಆರೋಗ್ಯವಾಗಿದ್ದ. ಆತನಿಗೆ ಜ್ವರ ಕಾಣಿಸಿಕೊಂಡು ಕೈಯಲ್ಲಿ ವೀಕ್‌ನೆಸ್ ಮತ್ತು ಮೂರ್ಛೆ ರೋಗ ಆರಂಭವಾಗಿದೆ. ಮನೆಯವರು ನಾಟಿ ಔಷಧಿ ಚಿಕಿತ್ಸೆ ಕೊಡಿಸಿದ್ದಾರೆ. ಆಗಲೇ ತಜ್ಞ ವೈದ್ಯರನ್ನು ಸಂಪರ್ಕಿಸಿದ್ದರೇ ಒಳ್ಳೆಯದಾಗುತ್ತಿತ್ತು. ಈಗ ಮೆದುಳು ಜ್ವರದಿಂದ ಆತನಿಗೆ ತೊಂದರೆ ಆಗಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬೆಳಗಾವಿ: ಕೋಮಾದಲ್ಲಿರುವ ಮಗನ ಪ್ರಾಣ ಉಳಿಸಲು ದೇವರ ಮೊರೆ ಹೋದ ತಾಯಿ
ಆಸ್ಪತ್ರೆ ಅವರು ಸಿಟಿ ಸ್ಕ್ಯಾನ್ ಸೇರಿ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿದ್ದಾರೆ. ಆದರೆ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಈ ಹಿಂದೆ ಕಿಡ್ನಿಗೆ ತೊಂದರೆಯಾಗಿ ಆರು ಬಾರಿ ಡಯಾಲಿಸಿಸ್ ಮಾಡಿದ್ದಾರೆ. ಆದರೆ ಆತನಿಗೆ ಯಾವ ಕಾರಣಕ್ಕೆ ಡಯಾಲಿಸಿಸ್ ಮಾಡಿದ್ದಾರೆ ಅನ್ನೋದು ಗೊತ್ತಾಗಿಲ್ಲ ಎಂದು ತಿಳಿಸಿದರು.
ವೈದ್ಯರ ನಿರ್ಲಕ್ಷ್ಯ ಏನೂ ಇಲ್ಲ, ಹುಬ್ಬಳ್ಳಿಯಲ್ಲಿ ತಜ್ಞ ವೈದ್ಯರೇ ಆರೋಗ್ಯ ತಪಾಸಣೆ ಮಾಡಿದ್ದಾರೆ. ಆದರೆ ಚಿಕಿತ್ಸೆಗೆ ಬಾಲಕ ಸ್ಪಂದಿಸಿಲ್ಲ. ಯಶ್ ಆಸ್ಪತ್ರೆಯವರು ಮಗುವಿನ ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳೋದಾಗಿ ಹೇಳಿದ್ದಾರೆ. ಮೆದುಳಿಗೆ ಗಂಭೀರ ಆಘಾತ ಆಗಿರುವುದರಿಂದ ತೀವ್ರ ನಿಗಾ ಘಟಕದಲ್ಲಿ ಇಡಬೇಕಾಗುತ್ತದೆ. ಪ್ರತೀ ದಿನದ ಆರೋಗ್ಯ ವರದಿಯನ್ನು ಪಡೆಯುತ್ತೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ:'ಈಟಿವಿ ಭಾರತ' ವರದಿ ಫಲಶೃತಿ.. ಕೋಮಾದಲ್ಲಿದ್ದ ಬಾಲಕನ ನೆರವಿಗೆ ಬಂದ್ರು ಬೆಳಗಾವಿ ಫೇಸ್ಬುಕ್ ಫ್ರೆಂಡ್ಸ್