ಬೆಳಗಾವಿ: ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋದಲ್ಲಿ ಮಾತನಾಡಿದ್ದ ಮಹಿಳೆಯರ ವಿರುದ್ಧ ಕಠಿಣ ಕ್ರಮಕ್ಕೆ ಭಕ್ತರು ಆಗ್ರಹಿಸಿದ್ದಾರೆ. ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಕೊಠಡಿ ಮುಂಭಾಗದಲ್ಲಿ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಿಯೋದಲ್ಲಿ ಮಾತನಾಡಿದ ಮಹಿಳೆಯರ ಬಂಧನ ಆಗುವವರೆಗೂ ಸ್ವಾಮೀಜಿ ಮೃತದೇಹ ಎತ್ತಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಇಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ. ಮೂಲತಃ ನೇಗಿನಹಾಳ ಗ್ರಾಮದ ನಿವಾಸಿಯಾಗಿದ್ದ ಸ್ವಾಮೀಜಿ ಗ್ರಾಮದಲ್ಲಿ ಕಳೆದ ಹದಿನೈದು ವರ್ಷಗಳಿಂದ ನೆಲೆಸಿದ್ದರು.
ಇದನ್ನೂ ಓದಿ: ನೇಣು ಬಿಗಿದು ಮಠದಲ್ಲೇ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ: ಡೆತ್‌ನೋಟ್ ವಿವರ ಬಹಿರಂಗ!
ಮಹಿಳೆಯರು ಮಾತನಾಡಿದ್ದ ಆಡಿಯೋದಲ್ಲಿ ಸ್ವಾಮೀಜಿ ಹೆಸರು ಪ್ರಸ್ತಾಪ?: ಕಳೆದ ವಾರ ಮಹಿಳೆಯರಿಬ್ಬರು ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಸ್ವಾಮೀಜಿಗಳ ಹೆಸರು ಪ್ರಸ್ತಾಪ ಆಗಿತ್ತು ಎನ್ನಲಾಗಿದೆ. ಧಾರವಾಡ ತಾಲೂಕಿನ ಸತ್ಯಕ್ಕ, ಕೊಪ್ಪಳದ ರುದ್ರಮ್ಮ ಹಾಸೀನಾಳ ಎಂಬುವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು.
ಆಡಿಯೋದಲ್ಲಿ ಮಾತನಾಡಿದ ಮಹಿಳೆಯ ವಿರುದ್ಧ ಕ್ರಮಕ್ಕೆ ಆಗ್ರಹ: ವೈರಲ್ ಆದ ಆಡಿಯೋದಲ್ಲಿ ನೇಗಿನಹಾಳ ಮಠದ ಶ್ರೀಗಳ ಬಗ್ಗೆಯೂ ಉಲ್ಲೇಖವಾದ ಹಿನ್ನೆಲೆಯಲ್ಲಿ ಶ್ರೀಗಳು ಮನನೊಂದಿದ್ದರಂತೆ. ಹೀಗಾಗಿ, ಆಡಿಯೋದಲ್ಲಿ ಮಾತನಾಡಿದ್ದ ಮಹಿಳೆಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಲಹೊಂಗಲ ಡಿವೈಎಸ್‌ಪಿಗೆ ಎರಡು ದಿನಗಳ ಹಿಂದೆ ಸೋಮಪ್ಪ ಬಾಗೇವಾಡಿ ಎಂಬುವವರು ದೂರು ನೀಡಿದ್ದರು. ದೂರಿನಲ್ಲಿ ಲಿಂಗಾಯತ ಮಠಾಧೀಶರ ಬಗ್ಗೆ ಸುಳ್ಳು ಆಡಿಯೋ ವೈರಲ್ ಮಾಡಲಾಗ್ತಿದೆ. ಮಾತನಾಡಿದ್ದು ಯಾರು ಎಂಬುದರ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿದ್ದರು.
ನಿನ್ನೆ ತಡರಾತ್ರಿವರೆಗೆ ಭಕ್ತರೊಂದಿಗೆ ಸ್ವಾಮೀಜಿ ಚೆನ್ನಾಗಿದ್ದರು. ಆದರೆ, ಇಂದು ಬೆಳಗ್ಗೆ ಭಕ್ತರು ಬಂದು ನೋಡಿದಾಗ ಸ್ವಾಮೀಜಿ ಮಠದಲ್ಲೇ ನೇಣು ಹಾಕಿಕೊಂಡಿದ್ದಾರೆ. ಬೈಲಹೊಂಗಲ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ನಿರವಮೌನ ವ್ಯಕ್ತವಾಗಿದೆ.