ಬೆಳಗಾವಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಚಿವ ಮುರುಗೇಶ್ ನಿರಾಣಿಗೆ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದಾರೆ. ಅಯೋಗ್ಯರನ್ನು ವರಿಷ್ಠರು ಸಿಎಂ ಮಾಡುವುದಿಲ್ಲ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಈಶ್ವರಪ್ಪ, ಯತ್ನಾಳ್, ನಿರಾಣಿ ಸಂಧಾನ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿಎಂ ಆಗುತ್ತೇನೆ ಎಂದು ಯಾರ್ಯಾರೋ ಹಗಲು ಕನಸು ಕಾಣ್ತಿದ್ದಾರೆ. ಸೂಟು ಹೊಲಿಸಿಕೊಂಡವರು ಇದ್ದಾರೆ. ದೊಡ್ಡವರಿಗೆ ಹಣ ಕೊಟ್ಟಿದ್ದೇನೆ, ರಿಸರ್ವ್ ಇಟ್ಟಿದ್ದೇನೆ. ಬೊಮ್ಮಾಯಿ ಕೇಂದ್ರ ಮಂತ್ರಿ ಆಗ್ತಾರೆ ಎಂಬ ಮೂರ್ಖತನದ ಹೇಳಿಕೆ ಕೊಡ್ತಾ ಇದ್ದಾರೆ. ಆದರೆ ಇಲ್ಲಿ ಅವರ ಆಸೆಗಳು ನಡೆಯಲ್ಲ. ಇಲ್ಲಿ ಇರೋದು ನರೇಂದ್ರ ಮೋದಿಯವರು. ಬಲಿಷ್ಠ ಹೈಕಮಾಂಡ್ ಎಂದು ಟಾಂಗ್ ನೀಡಿದ್ರು.
ಸಿಎಂ ಬದಲಾವಣೆ ಅನ್ನೋದು ಈಗ ಚರ್ಚೆ ಇಲ್ಲ. ಈಗ ಯಾವುದೇ ಬದಲಾಬಣೆ ಇಲ್ಲ. ಇಂಥ ಆಯೋಗ್ಯರನ್ನ ವರಿಷ್ಠರು ಸಿಎಂ ಮಾಡಲ್ಲ. ಬೋಗ ವಸ್ತುಗಳನ್ನ ಕೊಡೋರನ್ನ ಸಿಎಂ ಮಾಡಲ್ಲ. ದೊಡ್ಡ ದೊಡ್ಡ ಸಂಧಾನ ಮಾಡ್ತಿದ್ದಾರೆ ನಿಜ. ಇಂತವರನ್ನ ಒಪ್ಪುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂಥ ಆಯೋಗ್ಯನ ಜೊತೆ ನಾನು ಸೇರಲ್ಲ. ಆ ರೀತಿ ರಾಜಿಯಾಗಿ ಮಂತ್ರಿಯಾಗುವ ಪರಿಸ್ಥಿತಿ ನನಗೆ ಬಂದಿಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ಸಿಎಂ ಬದಲಾವಣೆ ಯತ್ನಾಳ್ ಹೇಳಿಕೆ : ನನಗೆ ಅಮಿಷವೊಡ್ಡುತ್ತಿದ್ದಾರೆ. ಮಂತ್ರಿ ಮಾಡ್ತೇನೆ, ಡಿಸಿಎಂ ಮಾಡ್ತೇನೆ ಅಂತಿದ್ದಾರೆ. ಜನವರಿ 2ನೇ ವಾರದಲ್ಲಿ ಸಿಎಂ ಆಗ್ತೀನೆಂದು ಕನಸು ಕಾಣ್ತಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಯತ್ನಾಳ್ ಟಾಂಗ್ ನೀಡಿದರು.
ಕರ್ನಾಟಕದಲ್ಲೂ ಅಂತ್ಯ ಕಾಣಲಿದೆ : ಕಾಂಗ್ರೆಸ್ ನಿಂದ ಯಾವಾಗಲೂ ಹಿಂದೂ ಪರ ವಿಚಾರಗಳಿಗೆ ವಿರೋಧ ಇದೆ. ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ. ಅದಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗದಂತೆ ಉಳಿದಿದ್ದಾರೆ ಎಂದು ಕಿಡಿಕಾರಿದರು. ಮಾಜಿ ಪ್ರಧಾನಿ ದಿ. ಜವಾಹರ್ ಲಾಲ್ ನೆಹರೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿವರೆಗೆ ಕಾಂಗ್ರೆಸ್ ನವರು ಹಿಂದೂ ವಿರೋಧಿಯಾಗಿದ್ದಾರೆ. ಮತಾಂತರ ನಿಷೇಧ ಬಿಲ್ ವಿರೋಧಿಸಿದರೆ ಕರ್ನಾಟಕದಲ್ಲೂ ಅವರು ಅಂತ್ಯ ಕಾಣಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.