ಬೆಳಗಾವಿ: ಕೊರೊನಾ ಲಸಿಕೆ ಡ್ರೈ ರನ್ ಯಶಸ್ವಿಯಾದ ಹಿನ್ನೆಲೆ ಲಸಿಕೆ ಸಂಗ್ರಹಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭೌಗೋಳಿಕವಾಗಿ ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಗಡಿ ಜಿಲ್ಲೆ ಬೆಳಗಾವಿ ಪಾತ್ರವಾಗಿದೆ. ಹೀಗಾಗಿ ಆರಂಭಿಕ ಹಂತದಲ್ಲಿ 36 ಲಕ್ಷ ಲಸಿಕೆ ಸಂಗ್ರಹಕ್ಕೆ ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲಸಿಕೆ ಬಿಡುಗಡೆ ಆದ್ರೆ ಅದರ ಸಂಗ್ರಹಣೆಗೆ ಜಿಲ್ಲಾದ್ಯಂತ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಎರಡು ವಾಕ್ ಇನ್ ಕೂಲರ್ಸ್, ಒಂದು ವಾಕ್ ಇನ್ ಫ್ರೀಜರ್ ಮಂಜೂರಾಗಿವೆ.
ಓದಿ-ಡಿನೋಟಿಫಿಕೇಷನ್ ಪ್ರಕರಣ: ಸಿಎಂ ವಿರುದ್ಧ ಲೋಕಾಯುಕ್ತ ತನಿಖೆ ಮುಂದುವರೆಸಲು ಹೈಕೋರ್ಟ್ ಆದೇಶ
ಇದರ ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂಡ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ನಗರದ ವ್ಯಾಕ್ಸಿನ್ ಡಿಪೋದಲ್ಲಿರುವ ಡಿಎಚ್‌ಒ ಕಚೇರಿ ಆವರಣದಲ್ಲಿ ಲಸಿಕಾ ಸಂಗ್ರಹಣಾ ಘಟಕ ಸ್ಥಾಪಿಸಲಾಗಿದೆ. ಜಿಲ್ಲೆಯ 180 ಕೋಲ್ಡ್ ಚೈನ್ ಪಾಯಿಂಟ್ಸ್‌ಗಳಿಗೆ ಇದೇ ಘಟಕದಿಂದ ಲಸಿಕೆ ರವಾನಿಸಲು ಪ್ಲ್ಯಾನ್ ಮಾಡಲಾಗಿದೆ.
ಸಂಕ್ರಮಣದ ಒಳಗೆ ಜಿಲ್ಲೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗುತ್ತದೆ. ಹೀಗಾಗಿ ಆರಂಭಿಕ ಹಂತದಲ್ಲಿ 6 ಲಕ್ಷ ಲಸಿಕೆ ಸಂಗ್ರಹವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.