ಬೆಳಗಾವಿ : ಕೊಲೆ ಪ್ರಕರಣವೊಂದರಲ್ಲಿ ಅಮಾಯಕರನ್ನ ಬಂಧಿಸಿ ₹15 ಲಕ್ಷ ಲಂಚ ಪಡೆದು ಕಿರುಕುಳ ನೀಡಿದ ಆರೋಪ ಗೋಕಾಕ್ ಪೊಲೀಸರು ವಿರುದ್ಧ ಕೇಳಿ ಬಂದಿದೆ. ಈ ಹಿನ್ನೆಲೆ ಸಮಗ್ರ ತನಿಖೆಗೆ ಬೆಳಗಾವಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಆದೇಶ ನೀಡಿದ್ದಾರೆ.
ಗೋಕಾಕ್ ಇನ್ಸ್‌ಪೆಕ್ಟರ್ ಗೋಪಾಲ್ ರಾಠೋಡ್, ಪಿಎಸ್ಐ ಹಾಗೂ ಸಿಬ್ಬಂದಿ ವಿರುದ್ಧ ಬೆಳಗಾವಿ ಜಿಲ್ಲೆ ಗೋಕಾಕ್‌ನ ಸಿದ್ದಪ್ಪ ಬಬಲಿ ಕುಟುಂಬಸ್ಥರು ಗಂಭೀರ ಆರೋಪಿ ಮಾಡಿದ್ದಾರೆ. ಇದಲ್ಲದೇ ನಿನ್ನೆ(ಶನಿವಾರ) ನ್ಯಾಯಕ್ಕಾಗಿ ನಗರದ ಡಿಸಿ ಕಚೇರಿಗೆ ಆಗಮಿಸಿ ವೃದ್ಧ ದಂಪತಿ, ಕುಟುಂಬಸ್ಥರು ಮಾಧ್ಯಮದವರು ಮುಂದೆ ಕಣ್ಣೀರು ಹಾಕಿದ್ದಾರೆ.
ಮತ್ತೊಂದೆಡೆ ಗೋಕಾಕ್ ಇನ್ಸ್‌ಪೆಕ್ಟರ್, ಸಿಬ್ಬಂದಿ ವಿರುದ್ಧ ಸಿದ್ದಪ್ಪ ಬಬಲಿ ಕುಟುಂಬಸ್ಥರು ಈಗಾಗಲೇ ನ್ಯಾಯಕ್ಕಾಗಿ ಸಿಎಂ, ಗೃಹಸಚಿವರು ಹಾಗೂ ಲೋಕಾಯುಕ್ತ, ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ : 2021ರ ಜುಲೈ 17ರಂದು ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಮಹಾಂತೇಶ ನಗರ ಬಡಾವಣೆಯಲ್ಲಿ ಮಂಜುನಾಥ ಮುರಕಿಭಾವಿ ಎಂಬುವರ ಕೊಲೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಸಿದ್ದಪ್ಪ ಬಬಲಿ ಮಕ್ಕಳಾದ ಕೃಷ್ಣ,ಅರ್ಜುನ್ ಎಂಬುವರನ್ನು ಬಂಧಿಸಲಾಗಿತ್ತು. ಬಂಧಿತರ ಅಕ್ಕನ ಮಗಳನ್ನು ಕೊಲೆಯಾದ ಯುವಕ ಮಂಜುನಾಥ ಪ್ರೀತಿಸುತ್ತಿದ್ದ ಎಂಬ ಆರೋಪವಿದೆ. ಅಕ್ಕನ ಮಗಳ ಮದುವೆಯಾದ ಬಳಿಕವೂ ಮಂಜುನಾಥ ಸಂಪರ್ಕದಲ್ಲಿದ್ದ ಹಿನ್ನೆಲೆ ಆತನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.
ಆದರೆ, ಬಂಧಿತರಿಗೂ ಹಾಗೂ ಕೊಲೆಯಾದ ಯುವಕನಿಗೂ ಯಾವುದೇ ಸಂಬಂಧ ಇಲ್ಲ. ಮಂಜು ಬಸಪ್ಪ ರಂಗನಕೊಪ್ಪ ಎಂಬುವರ ಹೇಳಿಕೆ ಮೇಲೆಯಷ್ಟೇ ನಮ್ಮ ಮಕ್ಕಳನ್ನ ಬಂಧಿಸಿದ್ದಾರೆ. ಕೊಲೆಯಲ್ಲಿ ಯಾವುದೇ ಸಾಕ್ಷ್ಯಾಧಾರ ಇಲ್ಲದೇ ತಮ್ಮ ಮಕ್ಕಳನ್ನು ಬಂಧಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲ, ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ಮನಬಂದಂತೆ ಹೊಡೆಯುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ. ರಾತ್ರಿ ವೇಳೆ ಮನೆಗೆ ಬಂದು ಹಣ ಕೇಳುತ್ತಿದ್ದಾರೆ. ಇಲ್ಲವಾದರೆ ನಿಮ್ಮ ಮೇಲೂ ಕೇಸ್ ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದಲ್ಲದೇ ಕುಟುಂಬಸ್ಥರ ಮೇಲೆ ಕೇಸ್ ಹಾಕದಿರಲು ಗೋಕಾಕ್ ಸಿಪಿಐ ಗೋಪಾಲ್ ರಾಠೋಡ್, ಪಿಎಸ್ಐ ಹಾಗೂ ಸಿಬ್ಬಂದಿ ಗ್ರಾಮದ ಪ್ರಮುಖರ ಮುಖಾಂತರ 15 ಲಕ್ಷ ರೂ. ಹಣ ಪಡೆದಿದ್ದಾರೆ. ನಾವು ಜಮೀನು ಅಡವಿಟ್ಟು ಹಣ ನೀಡಿದ್ದೇವೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಸದ್ಯ ಬಬಲಿ ಕುಟುಂಬಸ್ಥರ ಆರೋಪದ ಬಗ್ಗೆ ತನಿಖೆಗೆ ಬೆಳಗಾವಿ ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ.