ಬೆಳಗಾವಿ : ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿ 15 ಲಕ್ಷ ರೂಪಾಯಿ ಪಡೆದ ಹಾಗೂ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆ ಗೋಕಾಕ್ ಸಿಪಿಐ ಹಾಗೂ ಪಿಎಸ್‍ಐ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಸಂಬಂಧ ಠಾಣೆಯ ಪಿಎಸ್ಐ ನಾಗರಾಜ್ ಕಿಲ್ಲಾರಿ ಅವರನ್ನು ಹೆಚ್ಚುವರಿ ಎಸ್ಪಿ ಮಹಾನಿಂಗ್ ನಂದಗಾವಿ ಅವರು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಸಿಪಿಐ ಗೋಪಾಲ್ ರಾಠೋಡ್, ಪೇದೆಗಳಾದ ಕಸ್ತೂರಿ, ಪಾಟೀಲ್ ವಿಚಾರಣೆಗೆ ಗೈರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗೋಕಾಕ್‌ನ ಮಹಾಂತೇಶ ನಗರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿ 15 ಲಕ್ಷ ಲಂಚ ಪಡೆದಿರುವ ಆರೋಪದ ಹಿನ್ನೆಲೆ ಗೋಕಾಕ್ ಸಿಪಿಐ ಗೋಪಾಲ್ ರಾಠೋಡ್ ಅವರ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶ ಹೊರಡಿಸಿದ್ದರು.
ಬೆಳಗಾವಿ ಎಸ್ಪಿ ಆದೇಶ ಹಿನ್ನೆಲೆ ಗೋಕಾಕ್ ತಾಲೂಕಿನ ಪೊಲೀಸ್ ಠಾಣೆಗೆ ಆಗಮಿಸಿದ ಹೆಚ್ಚುವರಿ ಎಸ್ಪಿ ಮಹಾನಿಂಗ್ ನಂದಗಾವಿ ಅವರು ಗೋಕಾಕ್ ಪಿಎಸ್ಐ ನಾಗರಾಜ್ ಕಿಲ್ಲಾರಿ ಅವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರಣೆಗೆ ಗೋಕಾಕ್ ಸಿಪಿಐ ಗೋಪಾಲ್ ರಾಠೋಡ್, ಪೇದೆಗಳಾದ ಕಸ್ತೂರಿ, ಪಾಟೀಲ್ ಗೈರಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ ಎಂಬ ಆರೋಪವೂ ಇದ್ದು, ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಹೊರ ಬರಲಿದೆ.
ಓದಿ : ಬಸ್ನಲ್ಲಿ ಯುವತಿ ಜತೆ ಅಸಭ್ಯ ವರ್ತನೆ ಆರೋಪ : ಯುವಕ ಪೊಲೀಸ್ ವಶಕ್ಕೆ