ಚಿಕ್ಕೋಡಿ : ಟಿಪ್ಪರ್ ಬೈಕ್ ಹಾಗೂ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದ್ದು, ಅಫಘಾತದ ರಭಸಕ್ಕೆ ಟಿಪ್ಪರ್ ಹಾಗೂ ಸ್ಕೂಟಿಗೆ ಬೆಂಕಿ ಹೊತ್ತಿಕೊಂಡಿದೆ.
ನಿಡಗುಂದಿ ಗ್ರಾಮದ ಪೂನಂ ತಳವಾರೆ (25), ಸ್ಕೂಟಿ ಚಾಲಕಿ, ಬೊಮ್ಮನಾಳ ಗ್ರಾಮದ ಬಾಳಪ್ಪ ಕಾಂಬಳೆ (22) ಬೈಕ್ ಸವಾರ ಮೃತಪಟ್ಟಿದ್ದಾರೆ. ಹಾರೂಗೇರಿಯಿಂದ ಬೊಮ್ಮನಾಳ ಕಡೆಗೆ ಬರುತ್ತಿದ್ದ ಬೈಕ್ ಮತ್ತು ಟಿಪ್ಪರ್ ಮಧ್ಯೆ ಅಪಘಾತ ಸಂಭವಿಸಿದೆ.
ಟಿಪ್ಪರ್ ನಿಡಗುಂದಿಯಿಂದ ಹಾರೂಗೇರಿ ಕಡೆಗೆ ಹೋಗುತ್ತಿದ್ದ ಸ್ಕೂಟಿ ಮೇಲೆ ಹರಿದಿದೆ. ಸ್ಕೂಟಿ ಮೇಲಿದ್ದ ಪೂನಂ ತಳವಾರೆ ಲಾರಿ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಬಾಳಪ್ಪ ಕಾಂಬಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಆಕಸ್ಮಿಕವಾಗಿ ಟಿಪ್ಪರ್ ಹಾಗೂ ಸ್ಕೂಟಿಗೆ ಬೆಂಕಿ ಹತ್ತಿಕೊಂಡಿದ್ದು, ಟಿಪ್ಪರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ಆರಿಸಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.