ಬೆಳಗಾವಿ: ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿನ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಭೂಪರಿವರ್ತನೆ ಮತ್ತು ಲೇಔಟ್ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸಲು ವಿನಾಕಾರಣ ವಿಳಂಬ ಮಾಡುವುದು ಮತ್ತು ಸಾರ್ವಜನಿಕರಿಂದ ಹೆಚ್ಚಿಗೆ ಹಣ ಕೀಳುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಲಾಗಿದೆ.
ಸುವರ್ಣ ವಿಧಾನಸೌಧ ಕಟ್ಟಡದಲ್ಲಿರುವ ಬೆಳಗಾವಿ ವಿಭಾಗದ ಕಚೇರಿ ವ್ಯಾಪ್ತಿಗೆ ಬೆಳಗಾವಿ ಗ್ರಾಮಾಂತರ, ಖಾನಾಪೂರ, ಬೈಲಹೊಂಗಲ, ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳು ಒಳಪಡುತ್ತವೆ. ನಿಪ್ಪಾಣಿಯಲ್ಲಿರುವ ಚಿಕ್ಕೋಡಿ ವಿಭಾಗದ ಕಚೇರಿ ವ್ಯಾಪ್ತಿಗೆ ಅಥಣಿ, ಚಿಕ್ಕೋಡಿ, ಹುಕ್ಕೇರಿ, ರಾಯಬಾಗ ಮತ್ತು ಗೋಕಾಕ ತಾಲೂಕುಗಳ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಭೂಪರಿವರ್ತನೆ ಮತ್ತು ಲೇಔಟ್ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮುಂಚೆ ಸದರಿ ಕಚೇರಿಗಳಿಂದ ಅಭಿಪ್ರಾಯ ಪಡೆಯಲಾಗುತ್ತದೆ. ಆದರೆ, ಅಭಿಪ್ರಾಯ ನೀಡಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ಎಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆದಿದೆ.
ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಕರುಣಾಕರ್ ಶೆಟ್ಟಿ ಮತ್ತು ಮಂಜುನಾಥ ಗಂಗಲ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇನ್ಪೆಕ್ಟರ್ಗಳಾದ ಅಡಿವೇಶ ಗುದಿಗೊಪ್ಪ, ಸುನಿಲಕುಮಾರ್, ಅಲಿಶೇಖ ಮತ್ತು ಪರಮೇಶ್ ಕವಟಗಿ ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು ಕೊರೊನಾ ಸ್ಫೋಟ : ಒಂದೇ ದಿನ 566 ಮಂದಿಗೆ ಸೋಂಕು ದೃಢ