ಬೆಳಗಾವಿ/ವಿಜಯಪುರ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಔಷಧ ಹಾಗೂ ರಸಗೊಬ್ಬರ ಮಾರಾಟ ಮಳಿಗೆಯ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿಯ ಕೃಷಿ ಅಧಿಕಾರಿ ಹಾಗೂ ವಿಜಯಪುರ ಗ್ರಾಮೀಣ ಬಿಇಒ ಕಚೇರಿಯ ಎಫ್ಡಿಎ ಎಸಿಬಿ ಬಲೆಗೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಕಚೇರಿಯ ಕೃಷಿ ಅಧಿಕಾರಿ ಯೋಗೇಶ ಫಕಿರೇಶ ಅಗಡಿ ಎಸಿಬಿ ಬಲೆಗೆ ಬಿದ್ದವರು. ಔಷಧ ಹಾಗೂ ರಸಗೊಬ್ಬರ ಮಾರಾಟ ಮಳಿಗೆಯ ಲೈಸೆನ್ಸ್ ಪಡೆಯಲು ಅನಗೋಲದ ಮೌನೇಶ್ವರ ಕಮ್ಮಾರ್ ಅರ್ಜಿ ಹಾಕಿದ್ದರು. ಆಗ ಕೃಷಿ ಅಧಿಕಾರಿ ಯೋಗೇಶ ಅಗಡಿ ಅವರು ಮೌನೇಶ್ವರ ಬಳಿ 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಮುಂಗಡವಾಗಿ ಮೌನೇಶ್ವರ 10 ಸಾವಿರ ನೀಡಿದ್ದರು. ಉಳಿದ ಹಣ ನೀಡುವವರೆಗೆ ಯೋಗೇಶ ಲೈಸೆನ್ಸ್ ತಡೆ ಹಿಡಿದಿದ್ದರು. ಈ ಸಂಬಂಧ ಮೌನೇಶ್ವರ ಕಮ್ಮಾರ್ ಎಸಿಬಿ ಠಾಣೆಯಲ್ಲಿ ದೂರು ನೀಡಿದ್ದರು. ಇಂದು ಉಳಿದ 20 ಸಾವಿರ ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಣ ಪಡೆಯುವಾಗ ಯೋಗೇಶ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಬಳಿಕ ಪಂಚರ ಸಮಕ್ಷಮದಲ್ಲಿ ಎಸಿಬಿ ಅಧಿಕಾರಿಗಳು ಯೋಗೇಶ ಮನೆ ಹಾಗೂ ಕಚೇರಿಯಲ್ಲಿ ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಕೃಷಿ ಅಧಿಕಾರಿ ಬಳಿ 3.98 ಲಕ್ಷ ನಗದು ಪತ್ತೆಯಾಗಿದೆ. ಎಸಿಬಿ ಡಿವೈಎಸ್‌ಪಿ ಜೆ.ಎಂ ಕರುಣಾಕರಶೆಟ್ಟಿ ನೇತೃತ್ವದಲ್ಲಿ ಪಿಐ ಅಡಿವೇಶ ಗೂದಿಗೊಪ್ಪ ಹಾಗೂ ತಂಡದಿಂದ ದಾಳಿ ನಡೆಸಲಾಗಿದೆ.
ವಿಜಯಪುರದಲ್ಲಿ ಶಿಕ್ಷಕರ ವರ್ಗಾಣೆ ಆರ್ಡರ್ ಕಾಪಿ ಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಎಫ್ಡಿಎ ವಿನೋದ ರಾಠೋಡ್ ಎಸಿಬಿ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ. ಶಿಕ್ಷಕರ ವರ್ಗಾವಣೆ ಆಗಿರುವ ಆದೇಶ ಪ್ರತಿ ಕೊಡಲು ಐದು ಸಾವಿರ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: ವಿಜಯನಗರ: ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ, ಚಿನ್ನಾಭರಣ, ನಗದು ಪತ್ತೆ