ಅಥಣಿ(ಬೆಳಗಾವಿ): ಹಿಪ್ಪರಗಿ ಬ್ಯಾರೇಜ್ ಮೇಲಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸಾರ್ವಜನಿಕರು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ನಡೆದಿದೆ.
ರಾಮದುರ್ಗ ಮೂಲದ ಮಹಿಳೆ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಅಣೆಕಟ್ಟೆ ಮೇಲಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕಂಡ ಅಲ್ಲಿಯೇ ಇದ್ದ ಜನರು ಕೂಡಲೇ ಅಥಣಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ 100 ಅಡಿ ಆಳದಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿ ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಬಳಿಕ ಮಹಿಳೆಯನ್ನು ಅಥಣಿ ಸಾರ್ವಜನಿಕ ಆಸ್ಪತ್ರೆ ದಾಖಲು ಮಾಡಿದ್ದಾರೆ.
ಕೌಟುಂಬಿಕ ಕಲಹದಿಂದ ನೊಂದಿದ್ದ ಮಹಿಳೆ ಹಿಪ್ಪರಗಿ ಬ್ಯಾರೇಜ್ ಮೇಲಿನಿಂದ 100 ಅಡಿಯ ಆಳದ ನದಿಗೆ ಬಿದ್ದಿದ್ದಾರೆ. ಬಳಿಕ ಆಕೆ ಅಣೆಕಟ್ಟಿನ ಬಾಗಿಲಿನ ಗೇಟ್ ಹಿಡಿದು ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಮಹಿಳೆ ಪ್ರಾಣ ಉಳಿದಿದೆ.