ಬೆಳಗಾವಿ: ಕೊರೊನಾ ತಾಂಡವವಾಡುತ್ತಿದ್ದರೂ ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಇನ್ನುಳಿದ ಮಂತ್ರಿಗಳು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಈ ಕಾರಣಕ್ಕೆ ಮಂತ್ರಿಗಳು ಎಲ್ಲಿದ್ದಾರೆ ಹುಡುಕಿಕೊಡಿ ಅಭಿಯಾನ ಆರಂಭಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬೆಳಗಾವಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕಿತ್ತೋ ಅಷ್ಟನ್ನು ಸರ್ಕಾರ ನೀಡಿಲ್ಲ. ಮಂತ್ರಿಗಳು ಜನರಿಗೆ ಸ್ಪಂದಿಸಿಲ್ಲ. ಬಹಳಷ್ಟು ಮಂತ್ರಿಗಳು ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ. ತಮ್ಮ ಕ್ಷೇತ್ರಕ್ಕೂ ಬಂದಿಲ್ಲ, ತಮ್ಮ ಜಿಲ್ಲೆಗೂ ಬಂದಿಲ್ಲ. ಇದನ್ನೆಲ್ಲ ಜನತೆ ಗಮನಿಸುತ್ತಿದ್ದು, ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ವಾರಕ್ಕೊಮ್ಮೆ ಸಭೆಯಾಗಬೇಕು. ಪ್ರತಿಪಕ್ಷದವರು, ಎನ್‌ಜಿಓಗಳು, ಜನರ ಸಲಹೆಯನ್ನು ಸರ್ಕಾರ ಪಡೆಯಬೇಕು. ಆದರೆ, ಮಂತ್ರಿಗಳು ಸರಿಯಾಗಿ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ, ಸಭೆಯನ್ನೂ ನಡೆಸುತ್ತಿಲ್ಲ. ಇದಕ್ಕಾಗಿ 'ಮಂತ್ರಿಗಳು ಎಲ್ಲಿದ್ದಾರೆ ಹುಡುಕಿಕೊಡಿ' ಅಭಿಯಾನ ಆರಂಭಿಸಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕುರಿತು ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಎಲ್ಲರೂ ತಮ್ಮ ಕೆಲಸವಿದ್ದಾಗ ಸಿಎಂ ಭೇಟಿಯಾಗುತ್ತಾರೆ. ರಾತ್ರಿ ಭೇಟಿಯಾದರೇನು? ಹಗಲು ಭೇಟಿಯಾದರೇನು? ಸಿಎಂ ಬಳಿ ಕೆಲಸ ಇದ್ದರೆ ಹೋಗಬಾರದು ಅಂತೇನಿಲ್ಲ. ನಮ್ಮ ಕೆಲಸವಿದ್ದರೆ ನಾವು ಸಹ ಸಿಎಂರನ್ನು ಭೇಟಿಯಾಗುತ್ತೇವೆ. ಸಿಎಂರನ್ನು ಭೇಟಿಯಾದರೆ ಅಡ್ಜಸ್ಟ್ಮೆಂಟ್ ರಾಜಕಾರಣ ಹೇಗಾಗುತ್ತೆ? ನಮ್ಮ ಅಧಿಕಾರ ಇದ್ದಾಗ ಅವರೂ ಸಹ ಭೇಟಿಯಾಗಿರುತ್ತಾರೆ. ಇದು ಸ್ವಾಭಾವಿಕ, ಇದಕ್ಕೆ ರಾಜಕೀಯ ಬಣ್ಣ ಹಚ್ಚಬಾರದು. ಬಿಜೆಪಿ ಸರ್ಕಾರಕ್ಕೆ ಹೆಚ್‌ಡಿಕೆ ಪರೋಕ್ಷ ಬೆಂಬಲ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಗೊತ್ತಿಲ್ಲ. ಅವರ ಪಕ್ಷವಿದೆ. ಯಾರಿಗೆ ಬೆಂಬಲ ಕೊಡಬೇಕು ಅನ್ನೋದು ಅವರಿಗೆ ಬಿಟ್ಟ ವಿಚಾರ ಎಂದರು.
ಕೊರೊನಾ ನಿರ್ವಹಣೆ ಬಗ್ಗೆ ಲೆಕ್ಕ ಕೊಡುವ ವಿಚಾರದಲ್ಲಿ ಸರ್ಕಾರ ಸತ್ಯ ಮರೆಮಾಚುತ್ತಿದೆ. ಕೋವಿಡ್ ನಿರ್ವಹಣೆಗೆ ಒಂದೆಡೆ 4 ಸಾವಿರ ಕೋಟಿ ಖರ್ಚಾಗಿದೆ ಅಂತಾರೆ. ಲೆಕ್ಕ ಕಡಿಮೆ ಕೊಡ್ತಾರೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ. ಕೋವಿಡ್ ರೋಗಿಗಳಿಗೆ ಕೆಲವು ಜಿಲ್ಲೆಗಳಲ್ಲಿ ಬೆಡ್ ಕೊರತೆಯಿದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ನಾವು ಡಿಫೆಂಡ್ ಆಗುವುದೇ ಬೇಡ. ನಮ್ಮಲ್ಲಿ ಸಾಕಷ್ಟು ಹಾಸ್ಟೆಲ್‌ಗಳಿವೆ, ಇವುಗಳನ್ನು ಬಳಸಬೇಕು. ಈಗಾಗಲೇ ಕೆಲವೆಡೆ ಹೋಬಳಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಸ್ವಲ್ಪ ದಟ್ಟಣೆ ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಕೋವಿಡ್ನಿಂದಲೇ ಮೃತಪಡುತ್ತಿದ್ದಾರೆ ಎಂದು ಹೇಳಕ್ಕಾಗಲ್ಲ. ಕೋವಿಡ್ ಡೆತ್ ರೆಷಿಯೋ ಕಡಿಮೆಯೇ ಇದೆ. ಹೃದಯ ಸಂಬಂಧಿ ಸೇರಿ ಇತರೆ ರೋಗಗಳಿಂದಲೂ ಜನ ಸಾವನ್ನಪ್ಪುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.