ಬೆಳಗಾವಿ : ಮೂಡಲಗಿ ಪಟ್ಟಣದ ಹಳ್ಳದಲ್ಲಿ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಎಚ್‌ಒ ಮಹೇಶ ಕೋಣಿ, ಮೂಡಲಗಿ ಪೋಲಿಸರ ನೇತೃತ್ವದಲ್ಲಿ ಸ್ಕ್ಯಾನಿಂಗ್ ಸೆಂಟರ್, ಆರು ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಬೆಳಗಾವಿ ಡಿಎಚ್‌ಒ ನೇತೃತ್ವದ ತಂಡ ನವಜೀವನ ಆಸ್ಪತ್ರೆ ಹಾಗೂ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಗಳ ಕೈವಾಡ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗಳನ್ನು ಡಿಎಚ್‌ಒ ಮಹೇಶ ಕೋಣಿ ಸೀಜ್ ಮಾಡಿದ್ದಾರೆ.
ನಿನ್ನೆ ದಾಳಿ ನಡೆದಂತಹ ಸಂದರ್ಭದಲ್ಲಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ವೈದ್ಯೆ ಡಾ.ವೀಣಾ ಕಣಕರೆಡ್ಡಿ ಏಳು ಭ್ರೂಣಗಳನ್ನು ನಾವೇ ಎಸೆದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾಮೋಲಿನನಲ್ಲಿ ಭ್ರೂಣಗಳನ್ನು ಪ್ರಿಸರ್ವ್ ಮಾಡಿ ಬಾಟಲ್ನಲ್ಲಿ ಇಡಲಾಗಿತ್ತು. ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಶಿಫ್ಟ್ ಆಗುವಾಗ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ಆಯಾ(ಸಿಬ್ಬಂದಿ) ಬಳಿ ಭ್ರೂಣಗಳನ್ನು ಎಸೆಯಲು ಕೊಟ್ಟಿದ್ದಾರೆ. ವೆಂಕಟೇಶ ಆಸ್ಪತ್ರೆ ಸಿಬ್ಬಂದಿ ಅವುಗಳನ್ನು ತೆಗೆದುಕೊಂಡು ಹೋಗಿ ಜೂ.23ರಂದು ಹಳ್ಳದಲ್ಲಿ ಎಸೆದಿರುವುದಾಗಿ ವೆಂಕಟೇಶ ಆಸ್ಪತ್ರೆಯ ವೈದ್ಯೆ ಡಾ.ವೀಣಾ ಕಣಕರೆಡ್ಡಿ ತಪ್ಪು ಒಪ್ಪಿಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ಅಬಾಷನ್ ಮಾಡಿಸಿದ್ದ ಏಳು ಭ್ರೂಣಗಳು : ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದ್ದು, ನಿನ್ನೆ ಸಿಕ್ಕಿರುವ ಏಳು ಭ್ರೂಣಗಳು ಮೂರು ವರ್ಷಗಳ ಹಿಂದೆ ಅಬಾರ್ಷನ್ ಮಾಡಿದ್ದವುಗಳು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಪೊಲೀಸರ ದಾಳಿ ಭೀತಿಯಿಂದ ಕಳೆದ ಜೂನ್.23ರಂದು ರಾತ್ರೋರಾತ್ರಿ ಏಳು ಭ್ರೂಣಗಳನ್ನು ಐದು ಬಾಟಲಿಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಹಳ್ಳಕ್ಕೆ ಎಸೆದಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಬಯಲಾಗಿದ್ದು, ಈಗಾಗಲೇ ಆಸ್ಪತ್ರೆ ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ನಿಯಮಗಳನ್ನು ಗಾಳಿಗೆ ತೂರಿ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಲಿಂಗ ಪತ್ತೆ ಹಚ್ಚುತ್ತಿದ್ದರಾ ಆಸ್ಪತ್ರೆ ಸಿಬ್ಬಂದಿ? ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ಗೊತ್ತಿದ್ರೂ ಸುಮ್ಮನೆ ಕುಳಿತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಗಡಿ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡಿತಿದೆಯಾ? : ಬೆಳಗಾವಿಯ ಗಡಿ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆಯಾ ಎಂಬ ಅನುಮಾನ ಹುಟ್ಟುಹಾಕಿದ್ದು, ಹೆಣ್ಣುಭ್ರೂಣ ಅನ್ನೋ ಕಾರಣಕ್ಕೆ ಇಂತಹ ಪಾಪದ ಕೃತ್ಯ ಎಸಗಿರುವ ಅನುಮಾನ ಹೆಚ್ಚಾಗುವಂತೆ ಮಾಡಿದೆ. ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ನಿಷೇಧವಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಕಾನೂನಿನ ಭಯವೇ ಇಲ್ಲ ಎಂಬಂತಾಗಿದೆ.
ನಿನ್ನೆಯಷ್ಟೇ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಐದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಏಳು ಭ್ರೂಣಗಳ ಹತ್ಯೆ ಮಾಡಿ ಹಳ್ಳವೊಂದರಲ್ಲಿ ಎಸೆಯಲಾಗಿತ್ತು. ಗಂಡು ಮಕ್ಕಳ ವಿಪರೀತ ವ್ಯಾಮೋಹವೇ ಇಂತಹ ಘಟನೆಗೆ ಕಾರಣ ಎನ್ನಲಾಗಿದೆ. ಭ್ರೂಣ ಹತ್ಯೆಗೆ ಕಡಿವಾಣ ಹಾಕಲು ಜಿಲ್ಲಾ ಮಟ್ಟದಲ್ಲಿ ಜಾಗೃತದಳ ರಚಿಸಲಾಗಿದೆ. ಆದರೆ, ಜಾಗೃತ ದಳದವರು ಏನು ಕೆಲಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
ಸ್ಯ್ಕಾನಿಂಗ್ ಸೆಂಟರ್ ಮಾಲೀಕರು, ದನದಾಹಿ ವೈದ್ಯರು ಮತ್ತು ಪೋಷಕರ ಗಂಡುಮಗುವಿನ ವ್ಯಾಮೋಹಕ್ಕೆ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಲೇ ಇವೆ. ಸದ್ಯ ಏಳು ಭ್ರೂಣ ಮೃತದೇಹಗಳು ಬೆಳಗಾವಿಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇರಿಸಲಾಗಿದೆ. ವರದಿ ಬಂದ ಮೇಲೆ ಮತ್ತಷ್ಟು ಆಸ್ಪತ್ರೆಗಳ ಮೇಲೆ ಡಿಎಚ್ಓ ಅವರು ದಾಳಿ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ : ತುಮಕೂರು: ರಾಜಕಾಲುವೆ ಬಳಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ