ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಜಾರಕಿಹೊಳಿ ಕುಟುಂಬ ಇದೀಗ ದೇಶದ ರಾಜಕಾರಣದಲ್ಲೇ ಹೊಸದೊಂದು ದಾಖಲೆ ಮಾಡಿದೆ. ಜಾರಕಿಹೊಳಿ ಕುಟುಂಬದ ನಾಲ್ವರು ಸಹೋದರರು ಏಕಕಾಲಕ್ಕೆ ವಿಧಾನಸೌಧ ಪ್ರವೇಶಿಸಲಿದ್ದಾರೆ. ಇಂತಹ ವಿಶೇಷ ದಾಖಲೆ ದೇಶದ ಯಾವ ರಾಜ್ಯದಲ್ಲೂ ಇಲ್ಲ ಎಂಬುವುದು ವಿಶೇಷ.
ಜಾರಕಿಹೊಳಿ ಕುಟುಂಬದ ಮೂವರು ಈಗಾಗಲೇ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು. ರಾಷ್ಟ್ರೀಯ ಪಕ್ಷಗಳಲ್ಲಿರುವ ಮೂವರು ಸಹೋದರರು ಒಂದೊಂದು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸತೀಶ್ ಜಾರಕಿಹೊಳಿ ಇದ್ದು, ಇವರೀಗ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಬಿಜೆಪಿಯಲ್ಲಿರುವ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ.
ಮತ್ತೊರ್ವ ಸಹೋದರ ರಮೇಶ ಜಾರಕಿಹೊಳಿ ಕೂಡ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ಸಿಡಿ ಪ್ರಕರಣವೊಂದರಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ ಜಾರಕಿಹೊಳಿ ಇದೀಗ ಕಾನೂನು ಹೋರಾಟ ಮಾಡುತ್ತಿದ್ದಾರೆ.
ವಿಧಾನಸೌಧ ಪ್ರವೇಶಿಸಿದ ನಾಲ್ವರು ಸಹೋದರರು : ಇದೀಗ ಜಾರಕಿಹೊಳಿ ಕುಟುಂಬದ ಮತ್ತೋರ್ವ ಸದಸ್ಯ ಲಖನ್ ಜಾರಕಿಹೊಳಿ ಪರಿಷತ್ ಪ್ರವೇಶಿಸಲಿದ್ದಾರೆ. ದ್ವಿತೀಯ ಪ್ರಾಶಸ್ತ್ಯದ ಮತಗಳ ನೆರವಿನಿಂದ ಗೆದ್ದು ಬೀಗಿರುವ ಲಖನ್, ಮೂವರು ಸಹೋದರರ ಜೊತೆಗೆ ವಿಧಾನಸೌಧ ಪ್ರವೇಶಿಸಲಿದ್ದಾರೆ. ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ವಿಧಾನಸಭೆಯಲ್ಲಿದ್ದಾರೆ.
ಇವತ್ತಷ್ಟೇ ಗೆದ್ದು ಬೀಗಿರುವ ಲಖನ್ ಜಾರಕಿಹೊಳಿ ಪರಿಷತ್ ಪ್ರವೇಶಿಸಿದ್ದಾರೆ. ಹೀಗಾಗಿ, ಒಂದೇ ಕುಟುಂಬದ ನಾಲ್ವರು ಏಕಕಾಲಕ್ಕೆ ವಿಧಾನಸೌಧ ಪ್ರವೇಶಿಸುವ ಮೂಲಕ ಜಾರಕಿಹೊಳಿ ಕುಟುಂಬದ ಸಹೋದರರು ದೇಶದ ರಾಜಕಾರಣದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಜಾರಕಿಹೊಳಿ ಕುಟುಂಬದ ಹಿರಿಯ ಸಹೋದರ ರಮೇಶ್ ಜಾರಕಿಹೊಳಿ 1985ರಲ್ಲಿ ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸಿ, ಮೊದಲ ಚುನಾವಣೆಯಲ್ಲಿ ಸೋಲನುಭವಿಸಿದ್ದರು.
ನಂತರ ನಡೆದ ಎಲ್ಲ ಚುನಾವಣೆಗಳಲ್ಲಿ ರಮೇಶ ಗೆಲುವು ದಾಖಲಿಸಿ, ಮೂರು ಸಲ ಸಚಿವರಾಗಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಹಾಗೂ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ರಮೇಶ ಸಚಿವರಾಗಿದ್ದರು.
ಜೆಡಿಎಸ್ನಿಂದ ಪರಿಷತ್ ಮೂಲಕ ರಾಜಕೀಯ ಪ್ರವೇಶಿಸಿದ್ದ ಸತೀಶ್ ಜಾರಕಿಹೊಳಿ ಅವರು ಮುಂದೆ ಯಮಕನಮರಡಿ ಶಾಸಕರಾಗಿ ಧರಂಸಿಂಗ್ ನೇತೃತ್ವದ ಮೈತ್ರಿ ಸರ್ಕಾರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಎರಡು ಸಲ ಪರಿಷತ್ ಸದಸ್ಯರಾಗಿ ಇದೀಗ ಯಮಕನಮರಡಿ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ದಾಖಲಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ.
ಇನ್ನು ಬಾಲಚಂದ್ರ ಜಾರಕಿಹೊಳಿ ಧರಂಸಿಂಗ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಹಾಗೂ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಮೈತ್ರಿ ಸರ್ಕಾರ ಪತನದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಬಯಸದೇ ಕೆಎಂಎಫ್ ಅಧ್ಯಕ್ಷ ಸ್ಥಾನ ಬಾಚಿಕೊಂಡಿದ್ದಾರೆ.