ಬೆಳಗಾವಿ: ನಗರದ ಖಾನಾಪುರ ರಸ್ತೆಯ ಮೀನು ಮಾರುಕಟ್ಟೆ ಬಳಿ ನಿಂತಿದ್ದ ಶಾಲಾ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಗರದ ಕ್ಯಾಂಪ್ ಪ್ರದೇಶದಲ್ಲಿರುವ ವೆಲಕಮ್ ಹೋಟೆಲ್ ಬಳಿ ಸ್ಕೂಟಿ ಮೇಲೆ ಶಾಲೆಗೆ ಹೋಗಲು ರಸ್ತೆ ಬದಿಗೆ ನಿಂತಿದ್ದವರ ಮೇಲೆ ಲಾರಿ ಹರಿದಿದೆ. ಪರಿಣಾಮ, ಅರಹಾನ್ ಬೇಪಾರಿ (10) ಎಂಬ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ಬಾಲಕನ ಸಹೋದರಿ ಅತೀಕಾ ಬೇಪಾರಿ ಹಾಗೂ ಆಯುಷ್ಯ ಎಂಬವವರಿಗೆ ಗಂಭೀರ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಎಂದಿನಂತೆ ಬೆಳಗ್ಗೆ ಸಹೋದರಿಯ ಜೊತೆಗೆ ಮೃತ ವಿದ್ಯಾರ್ಥಿ ಮತ್ತು ಗಾಯಗೊಂಡವರು ಸಮೀಪದ ಶಾಲೆಗಳಿಗೆ ಹೋಗುವಾಗ ಘಟನೆ ಸಂಭವಿಸಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮತ್ತು ಯುವಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಭಾರಿ ವಾಹನಗಳ ಬೇಕಾಬಿಟ್ಟಿ ಓಡಾಟದಿಂದ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಎರಡು ದಿನಗಳ ಹಿಂದಷ್ಟೇ ನಗರದ ಹಳೇ ತರಕಾರಿ ಮಾರುಕಟ್ಟೆ ಬಳಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮರಳು ತುಂಬಿದ ಲಾರಿ ಚಕ್ರದಡಿ ಸಿಲುಕಿ ಮೃತಪಟ್ಟಟಿದ್ದಳು. ಇದೀಗ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ಹೀಗೆ ಬಿಟ್ಟರೆ ನಗರದಲ್ಲಿ ಜನಸಾಮಾನ್ಯರ ಸಂಚಾರಕ್ಕೂ ಕಷ್ಟವಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಭಯದಲ್ಲಿಯೇ ಶಾಲಾ-ಕಾಲೇಜಿಗೆ ತೆರಳುವ ಕಾಲ ಬರುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಉದ್ರೀಕ್ತ ಜನರು ಕಲ್ಲು ತೂರಿ ಲಾರಿಯನ್ನು ಜಕ್ಕಂಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಸ್ನೇಹಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಬೆಳಗ್ಗೆ ಕಾಲೇಜಿಗೆ ಹೋಗುವಾಗ ಎದುರಾದ ಯಮ: ಬೆಳಗಾವಿಯಲ್ಲಿ ಲಾರಿ ಹರಿದು ವಿದ್ಯಾರ್ಥಿನಿ ಸಾವು