ನಿಡಮನೂರು (ತೆಲಂಗಾಣ): ಆ ಇಬ್ಬರು ಗೆಳೆಯರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದಾರೆ. ಕ್ಯಾಂಪಸ್ನಲ್ಲಿ ಇರುವಾಗಲೇ ಅವರು ವರ್ಷಕ್ಕೆ 17 ಲಕ್ಷ ರೂಪಾಯಿ ಸಂಬಳ ಇರುವ ಕೆಲಸಕ್ಕೆ ಆಯ್ಕೆಯಾಗಿದ್ದರು. ಕೆಲವು ತಿಂಗಳು ಕೆಲಸ ಮಾಡಿದರೂ ಅವರಿಗೆ ಸಮಾಧಾನವಾಗಲಿಲ್ಲ. ಯಾರಿಗೋ ಯಾಕೆ ಕೆಲಸ ಮಾಡಬೇಕು?. ಸ್ಟಾರ್ಟಪ್ ಕಂಪನಿ ಆರಂಭಿಸಿ ಬೇರೆಯವರಿಗೆ ಕೆಲಸ ಕೊಡುವ ಮಟ್ಟಕ್ಕೆ ನಾವೇ ಬೆಳೆಯಬಹುದಲ್ಲವೇ? ಎಂದು ಯೋಚಿಸಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಕೃಷಿಯಲ್ಲಿ ಆಸಕ್ತಿ: ನಲ್ಗೊಂಡ ಜಿಲ್ಲೆ ನಿಡಮನೂರು ಮಂಡಲದ ನಾರಮ್ಮಗುಡೆಂನ ಶ್ರೀನಿವಾಸ್ ರೆಡ್ಡಿ ಮತ್ತು ಕೊಂಡ ಕೃಷ್ಣವೇಣಿ ಅವರ ಪುತ್ರ ಕಲ್ಯಾಣ್ ರೆಡ್ಡಿಯಾಗಿದ್ದಾರೆ. ಇನ್ನೂ ಹೈದರಾಬಾದ್ನ ಸಾಯಿಸುಂದರ್ ರೈನೇದಿ ಶ್ರೀನಿವಾಸ ರಾವ್ ಮತ್ತು ಅರುಣಾ ಕುಮಾರಿ ಅವರ ಪುತ್ರರಾಗಿದ್ದಾರೆ. ಇವರಿಬ್ಬರೂ ಸ್ನೇಹಿತರಾಗಿದ್ದು, ಬಾಲ್ಯದಿಂದಲೂ ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.
ಮೊಬೈಲ್ ಆ್ಯಪ್ ರಚನೆ: ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇಬ್ಬರೂ ತರಕಾರಿ, ಹಣ್ಣುಗಳು, ಸೊಪ್ಪುಗಳು ಮತ್ತು ಅಕ್ಕಿಯನ್ನು ಮನೆ ಮನೆಗೆ ತಲುಪಿಸುವ ವ್ಯಾಪಾರ ಪ್ರಾರಂಭಿಸಿದರು. ಅವರ ಸಾಫ್ಟ್‌ವೇರ್ ಜ್ಞಾನದ ಜೊತೆಗೆ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ ನಾಲ್ವರನ್ನು ಆಯ್ಕೆ ಮಾಡಿಕೊಂಡು, ವೆಬ್‌ಸೈಟ್ ಮತ್ತು ‘ರೂಟ್ ಇನ್ ರೂಟ್’ ಹೆಸರಿನ ಮೊಬೈಲ್ ಆ್ಯಪ್ ರಚಿಸಿದರು.
ಬಳಿಕ ಅವರು ಹೈದರಾಬಾದ್ ನಗರದ ಸುತ್ತಮುತ್ತಲಿನ ರೈತರ ಬಳಿಗೆ ಹೋಗಿ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸುವುದಾಗಿ ಹೇಳಿದರು. ನಂತರ ನಗರದ ವಿವಿಧ ಹೋಟೆಲ್‌ಗಳು, ಹಾಸ್ಟೆಲ್‌ಗಳು, ಕರಿ ಪಾಯಿಂಟ್ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ತೆರಳಿ ವ್ಯಾಪಾರದ ಬಗ್ಗೆ ವಿವರಿಸಿ ಮಾರುಕಟ್ಟೆಗೆ ಬಂದರು. ನಿತ್ಯ 50 ರಿಂದ 100 ಆರ್ಡರ್ಗಳು ಅವರಿಗೆ ದೊರೆಯುತ್ತಿವೆ.
70 ಲಕ್ಷ ಹೂಡಿಕೆ: ಈ ವ್ಯಾಪಾರದಿಂದ 17 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಎಲ್ಲ ಖರ್ಚು, ಉದ್ಯೋಗಿಗಳ ಸಂಬಳ ಸೇರಿ ಸುಮಾರು 70 ಲಕ್ಷ ಹೂಡಿಕೆ ಮಾಡಲಾಗಿದೆ. ಈವರೆಗೆ 30 ಲಕ್ಷ ಆದಾಯ ಬಂದಿದ್ದು, ಮುಂದಿನ ವರ್ಷದಲ್ಲಿ ಉಳಿದ 40 ಲಕ್ಷ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ.
ರೈತರೊಂದಿಗೆ ನೇರ ಸಂಪರ್ಕ: ನಾವು ಗ್ರಾಹಕರಿಗೆ ಉತ್ತಮವಾದ ತರಕಾರಿ, ಹಣ್ಣುಗಳನ್ನು ಒದಗಿಸುವ ಗುರಿ ಹೊಂದಿದ್ದೇವೆ. ಗದ್ದೆಗಳಲ್ಲಿ ಬೆಳೆದ ತರಕಾರಿ, ಹಣ್ಣುಗಳು ಮಾರಾಟವಾಗದೇ ಬಹುತೇಕ ವ್ಯರ್ಥವಾಗುತ್ತಿವೆ. ಹೀಗೆ ವ್ಯರ್ಥವಾಗುವುದನ್ನು ಕಡಿಮೆ ಮಾಡುವುದರ ಜೊತೆಗೆ ಜನರಿಗೆ ತಾಜಾ ತರಕಾರಿಗಳು ಹಾಗೂ ಹಣ್ಣುಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ವಿತರಣೆಗಾಗಿ ನಾವು ಎರಡು ಸ್ಟಾರ್ಟಪ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಕಲ್ಯಾಣ್ ರೆಡ್ಡಿ ಹೇಳಿದರು.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ನಿಮ್ಮ ಸಾಲದ ಅರ್ಹತೆ ನಿರ್ಧರಿಸುತ್ತೆ... ಉತ್ತಮ ಸ್ಕೋರ್ಗೆ ನೀವು ಮಾಡಬೇಕಿರುವುದೇನು?
ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದಿದ್ದರೂ ನನಗೆ ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ ಇತ್ತು. ಈ ಆಸಕ್ತಿಯೇ ಈ ಸ್ಟಾರ್ಟಪ್ ಆರಂಭಿಸಲು ಕಾರಣವಾಗಿದೆ. ಪ್ರಸ್ತುತ ನಾವು 600 ರೈತರೊಂದಿಗೆ ಸಂಪರ್ಕ ಹೊಂದಿದ್ದೇವೆ. ಅವರು ಯಾವ ಬೆಳೆ ಹಾಕುತ್ತಿದ್ದಾರೆ ಎಂಬ ವಿವರಗಳನ್ನು ಮೊದಲೇ ಪಡೆದು, ಬೆಳೆ ಮುಗಿಯುವಾಗ ಅವರನ್ನು ಸಂಪರ್ಕಿಸಿ ಬೆಳೆ ಖರೀದಿಸುತ್ತೇವೆ ಎಂದು ಸಾಯಿ ಸುಂದರ್ ಹೇಳುತ್ತಾರೆ.