ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಟ್ವಿಟರ್ ಅನ್ನು ವಾಣಿಜ್ಯೀಕರಣ ಮಾಡುವ ಆವೇಗದಲ್ಲಿ ಅದರ ಮಾಲೀಕ, ವಿಶ್ವದ ಧನಿಕ ಎಲಾನ್ ಮಸ್ಕ್ ಏನೇನೋ ಪ್ರಯೋಗ ನಡೆಸುತ್ತಿದ್ದು, ಟ್ವಿಟರ್ನ ಬ್ರ್ಯಾಂಡ್ ಚಿಹ್ನೆಯಾದ ನೀಲಿ ಹಕ್ಕಿ ಜಾಗದಲ್ಲಿ X ಅನ್ನು ಇತ್ತೀಚೆಗೆ ತಂದಿದ್ದರು. ಇದರ ವಿರುದ್ಧ ದೂರು, ಟೀಕೆಗಳು ಕೇಳಿ ಬಂದಿದ್ದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಂಪನಿಯ ಮೇಲೆ ಹಾಕಲಾಗಿದ್ದ ದೊಡ್ಡ X ಚಿಹ್ನೆಯನ್ನು ತೆರವು ಮಾಡಲಾಗಿದೆ.
ವಾರದ ಹಿಂದಷ್ಟೇ ಟ್ವಿಟರ್ನ ಮರು ಬ್ರಾಂಡಿಂಗ್ ವೇಳೆ X ಚಿಹ್ನೆಯನ್ನು ಸ್ಯಾನ್ಫ್ರಾನ್ಸಿಸ್ಕೋದಲ್ಲಿನ ಕಂಪನಿಯ ಕೇಂದ್ರ ಕಚೇರಿಯ ಮೇಲೆ ದೊಡ್ಡದಾಗಿ ನಿಲ್ಲಿಸಲಾಗಿತ್ತು. ಇದರ ಚಿತ್ರ, ವಿಡಿಯೋವನ್ನು ಮಸ್ಕ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಇದರ ವಿರುದ್ಧ ವಿಪರೀತ ದೂರುಗಳು ಕೇಳಿಬಂದಿವೆ. ಮರುಬ್ರಾಂಡಿಂಗ್ ಮಾಡುವ ಹಾದಿಯಲ್ಲಿ ಕಂಪನಿಯ ಗುರುತನ್ನೇ ಬದಲಿಸಿದ್ದು, ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿತ್ತು.
ಬಳಕೆದಾರರು ಮತ್ತು ಅಧಿಕಾರಿಗಳಿಂದ ದೂರುಗಳು ಬಂದ ನಂತರ ಎಲಾನ್ ಮಸ್ಕ್ ಅವರ X ಚಿಹ್ನೆಯನ್ನು ಅವರ ಸಾಮಾಜಿಕ ಮಾಧ್ಯಮ ಕಂಪನಿ ಮೇಲಿನಿಂದ ಸೋಮವಾರ ಮಧ್ಯಾಹ್ನ ತೆಗೆದುಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುರಕ್ಷತೆಯ ಪ್ರಶ್ನೆ: ಟ್ವಿಟರ್ ಕಂಪನಿಯ ಮೇಲೆ ನಿಲ್ಲಿಸಲಾಗಿದ್ದ ದೊಡ್ಡ X ಚಿಹ್ನೆ ಅಧಿಕಾರಿಗಳಲ್ಲಿ ಸುರಕ್ಷತೆಯ ಪ್ರಶ್ನೆ ಮೂಡಿಸಿದೆ. ಕಳೆದ ವಾರ ಟ್ವಿಟರ್ ಮರುಬ್ರಾಂಡಿಂಗ್ ಮಾಡುವ ವೇಳೆ ಕಂಪನಿಯ ಮೇಲೂ ದೊಡ್ಡ X ನಿಲ್ಲಿಸಿದ ಬಳಿಕ ಅಧಿಕಾರಿಗಳು ಕಂಪನಿಯನ್ನು ತಪಾಸಿಸಿದ್ದರು. ಇದಾದ ಬಳಿಕ ಸುರಕ್ಷತೆ ಕಾರಣಗಳಿಂದ ಚಿಹ್ನೆಯ ತೆರವಿಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ. ಆದರೆ, ಕಂಪನಿಯ ಸಿಬ್ಬಂದಿ ಇದನ್ನು ಸಮರ್ಥಿಸಿಕೊಂಡಿದ್ದರು.
ವಾಪಸ್ ಬರುತ್ತಾ ನೀಲಿಹಕ್ಕಿ?: ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಹಲವಾರು ನಿಯಮಗಳನ್ನು ಜಾರಿ ಮಾಡಿ ಬಳಿಕ ಅದನ್ನು ವಾಪಸ್ ಪಡೆದ ನಿದರ್ಶನಗಳಿವೆ. ಈ ಹಿಂದೆ ಕ್ರಿಪ್ಟೊಕರೆನ್ಸಿಯ ಲೋಗೋ ಆಗಿದ್ದ ನಾಯಿಯ ಮುಖವನ್ನು ಟ್ವಿಟರ್ ಲೋಗೋವಾಗಿ ಬದಲಿಸಿದ್ದರು. ಇದಾದ ಬಳಿಕ ವಾಪಸ್ ಪಡೆದಿದ್ದರು. ಅದರಂತೆ ಕಂಪನಿಯ ಮೇಲಿನ X ಚಿಹ್ನೆಯನ್ನು ತೆರವು ಮಾಡಲಾಗಿದ್ದು, ಹಿಂದಿನ ನೀಲಿಹಕ್ಕಿ ಚಿಹ್ನೆ ಮರು ಬಳಕೆಗೆ ತರಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ವಾರದ ಹಿಂದಷ್ಟೇ ಬದಲಾಗಿದ್ದ ಲೋಗೋ: ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ಅನ್ನು ಮರುಬ್ರಾಂಡಿಂಗ್ ಮಾಡಿ ಟೆಸ್ಲಾ ಸಿಇಒ ಮತ್ತು ಮಾಲೀಕ ಎಲಾನ್ ಮಸ್ಕ್ ವಾರದ ಹಿಂದಷ್ಟೇ ಘೋಷಿಸಿದ್ದರು. ಕಂಪನಿಯ ಮೇಲೆ ಎಲ್ಇಡಿ ಲೈಟಿಂಗ್ ಹಾಕುವ ಮೂಲಕ X ಲೋಗೋವನ್ನು ಅನಾವರಣ ಮಾಡಿದ್ದರು. ಇದರ ಬಳಿಕ ಟ್ವಿಟರ್ನಲ್ಲೇ RIPTWITTER ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿತ್ತು.
ಇದನ್ನೂ ಓದಿ: Twitter logo: 'ಹಾರಿ ಹೋದ ನೀಲಿಹಕ್ಕಿ' ಜಾಗದಲ್ಲಿ ಬಂತು X, ಬದಲಾಯ್ತು ಜನಪ್ರಿಯ ಟ್ವಿಟರ್ ಲೋಗೊ