ನವದೆಹಲಿ: ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್ ಲಾಭದ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇದನ್ನು ಈ ಹಿಂದೆ ಇದ್ದ ಟನ್‌ಗೆ 5,050 ರೂಪಾಯಿಗಳಿಂದ 4,350 ರೂಪಾಯಿಗಳಿಗೆ ಇಳಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ, ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಸಹ ಲೀಟರ್‌ಗೆ 6 ರೂ.ನಿಂದ 1.5 ರೂ.ಗೆ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಡೀಸೆಲ್ ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಲೀಟರ್‌ಗೆ 7.5 ರಿಂದ 2.50 ಕ್ಕೆ ಇಳಿಸಲಾಗಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ಹಾಗೆಯೇ ಪೆಟ್ರೋಲ್ ಮೇಲೆ ಶೂನ್ಯ ಅಬಕಾರಿ ಸುಂಕ ಮುಂದುವರಿಯಲಿದೆ.
ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಉತ್ಪನ್ನಗಳ ಕೊರತೆಯನ್ನು ಪರಿಹರಿಸಲು ಭಾರತ ಸರ್ಕಾರವು ಮೊದಲ ಬಾರಿಗೆ ಜುಲೈ 1, 2022 ರಂದು ವಿಂಡ್‌ಫಾಲ್ ತೆರಿಗೆ ಎಂದು ಕರೆಯಲ್ಪಡುವ ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ನಿರ್ದಿಷ್ಟ ಆರ್ಥಿಕ ಪರಿಸ್ಥಿತಿಗಳ ಕಾರಣದಿಂದ ನಿರ್ದಿಷ್ಟ ಕೈಗಾರಿಕೆಗಳು ಸರಾಸರಿಗಿಂತ ಹೆಚ್ಚಿನ ಲಾಭ ಪಡೆಯಲಾರಂಭಿಸಿದಾಗ ಅಂಥ ಕೈಗಾರಿಕೆಗಳ ಮೇಲೆ ಸರ್ಕಾರಗಳು ವಿಧಿಸುವ ಹೆಚ್ಚಿನ ತೆರಿಗೆಯನ್ನು ವಿಂಡ್‌ಫಾಲ್ ಟ್ಯಾಕ್ಸ್ ಎನ್ನುತ್ತಾರೆ.
ನವೆಂಬರ್ 2022 ರಲ್ಲಿ ಹಣಕಾಸು ಸಚಿವಾಲಯದ ಅಧಿಕೃತ ಗೆಜೆಟ್ ಅಧಿಸೂಚನೆಯ ಪ್ರಕಾರ, ಕೇಂದ್ರವು ಕಚ್ಚಾ ತೈಲದ ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಪ್ರತಿ ಟನ್‌ಗೆ ರೂ 11,000 ರಿಂದ ರೂ 9,500 ಕ್ಕೆ ಇಳಿಸಿತ್ತು. ಆದಾಗ್ಯೂ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಲೀಟರ್‌ಗೆ ರೂ 3.50 ರಿಂದ ರೂ 5 ಕ್ಕೆ ಮತ್ತು ಡೀಸೆಲ್‌ಗೆ ಲೀಟರ್‌ಗೆ ರೂ 12 ರಿಂದ ರೂ 13 ಕ್ಕೆ ಹೆಚ್ಚಿಸಲಾಗಿತ್ತು.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಬಿಐಸಿ ಅಧ್ಯಕ್ಷ ವಿವೇಕ್ ಜೋಹ್ರಿ, ನಾವು ಸರಾಸರಿ ಮಾಸಿಕ 1.45 ಲಕ್ಷ ಕೋಟಿ ರೂ.ಗಳಿಂದ 1.5 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ. 1.5 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ ಈಗ ಹೊಸ ಸಾಮಾನ್ಯ ಮಟ್ಟವಾಗಿದೆ ಮತ್ತು ಮುಂಬರುವ ವರ್ಷದಲ್ಲಿ ನಾವು ಈ ಅಂಕಿಯನ್ನು ದಾಟುವ ವಿಶ್ವಾಸವಿದೆ ಎಂದು ಹೇಳಿದರು. ಕಂದಾಯ ಇಲಾಖೆಯಡಿ ಕೆಲಸ ಮಾಡುವ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ (CBIC) ಇದು ಕಸ್ಟಮ್ಸ್ ಸುಂಕ, ಕೇಂದ್ರೀಯ ಅಬಕಾರಿ ಸುಂಕದ ಕೇಂದ್ರ ಸರಕು ಮತ್ತು ಸೇವಾ ತೆರಿಗೆಗಳಂತಹ ಪರೋಕ್ಷ ತೆರಿಗೆಗಳ ಲೆವಿ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದೆ.
ರಷ್ಯಾ ಮತ್ತು ಉಕ್ರೇನ್‌ನಲ್ಲಿ ಚಾಲ್ತಿಯಲ್ಲಿರುವ ಯುದ್ಧದ ಪರಿಸ್ಥಿತಿಗಳಿಂದಾಗಿ ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿದ್ದವು. ಪರಿಣಾಮವಾಗಿ ಭಾರತದ ತೈಲ ಕಂಪನಿಗಳು 2022 ರ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ಹೆಚ್ಚಿನ ನಿವ್ವಳ ಲಾಭ ಮಾಡಿಕೊಂಡಿವೆ. ಗೇಲ್, ಆಯಿಲ್ ಇಂಡಿಯಾ ಮತ್ತು ಓಎನ್ಜಿಸಿ ಅತಿ ಹೆಚ್ಚು ಆದಾಯ ಗಳಿಸಿದ ಕಂಪನಿಗಳಲ್ಲಿ ಸೇರಿವೆ.
ಇದನ್ನೂ ಓದಿ: ರಷ್ಯಾದಿಂದ ಅನಿಲ ಆಮದು ಭಾರತಕ್ಕೆ ಲಾಭದಾಯಕ: ವಿದೇಶಾಂಗ ಸಚಿವ ಎಸ್ ಜೈಶಂಕರ್