ಹೊಸ ಮನೆ ಅಥವಾ ಕಾರು ಮತ್ತಿತರ ಕಾರಣಕ್ಕೆ ತುರ್ತು ಹಣ ಬೇಕಾದ ಸಂದರ್ಭದಲ್ಲಿ ಬ್ಯಾಂಕ್ಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತೇವೆ. ಇಷ್ಟೇ ಅಲ್ಲದೇ, ಬಡ್ಡಿದರ ಕೊಂಚ ಹೆಚ್ಚಾದರೂ ಪರವಾಗಿಲ್ಲ ಎಂದು ಹಣದ ಅವಶ್ಯಕತೆ ಇದೆ ಎಂದಾಗ ವೈಯಕ್ತಿಕ ಸಾಲದ ಮೊರೆ ಕೂಡ ಹೋಗುತ್ತೇವೆ. ಸಾಲ ಪಡೆಯುವಾಗ ಬ್ಯಾಂಕ್ನಲ್ಲಿ ಅವಶ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಎಲ್ಲಾ ಮಾಹಿತಿಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸಿದರೂ ಕೆಲವೊಮ್ಮೆ ಬ್ಯಾಂಕ್ ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡುತ್ತದೆ. ಇಂತಹ ಪರಿಸ್ಥಿತಿ ಎದುರಾಗದಿರಲು ಏನು ಮಾಡಬೇಕು? ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಹೊಂದುವುದು ಅವಶ್ಯವಾಗಿದೆ.
ಬಡ್ಡಿದರಗಳು ಹೆಚ್ಚುತ್ತಿದ್ದು, ಚಿಲ್ಲರೆ ಸಾಲಗಳನ್ನು ಪಡೆಯುವವರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ಗಳು ಇಂತಹ ಸಾಲದ ಅರ್ಜಿಗಳನ್ನು ಬಹಳ ಜಾಗರೂಕತೆಯಿಂದ ಪರಿಶೀಲಿಸುತ್ತವೆ. ಅಲ್ಲದೇ, ಸಾಲ ನೀಡುವ ಮತ್ತು ಸಾಲದ ನೀಡಿದ ನಂತರದಲ್ಲಿ ಯಾವುದೇ ತೊಂದರೆ ಎದುರಾಗಬಾರದು ಎಂಬ ಉದ್ದೇಶದಿಂದ ಕೂಡ ಸಾಲದಾತರ ಸಾಲದ ಅರ್ಜಿಗಳಿಗೆ ಬ್ಯಾಂಕ್ಗಳು ಹೆಚ್ಚಿನ ಗಮನಹರಿಸಿ, ಸಣ್ಣ ಲೋಪ ಕಂಡು ಬಂದರೂ ತಿರಸ್ಕರಿಸುತ್ತವೆ. ಇನ್ನು ಅರ್ಜಿಗಳು ತಿರಸ್ಕರಿಸಲು ಇರುವ ಸಾಮಾನ್ಯ ಕಾರಣಗಳು ಇಂತಿವೆ.
ಅರ್ಜಿ ತಿರಸ್ಕಾರಕ್ಕೆ ಕಾರಣಗಳು ಇವು: ಸಾಮಾನ್ಯವಾಗಿ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸಿನ ಕಂಪನಿ (ಎನ್ಬಿಎಫ್ಸಿ) ಸಾಲದ ಅರ್ಜಿ ತಿರಸ್ಕಾರ ಮಾಡುವಾಗ ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ತಿಳಿಸುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್, ಉತ್ತಮ ಆದಾಯದ ಮಟ್ಟ ಇಲ್ಲದಿರುವುದು, ಈಗಾಗಲೇ ನಿನ್ನ ಸಾಲದ ಕಂತುಗಳ ನಿಮ್ಮ ಆದಾಯದ ಶೇ 50ರಷ್ಟು ಪಾಲನ್ನು ಹೊಂದಿರುವುದು. ವಿಳಂಬ ಇಎಂಐ ಪಾವತಿ, ಪದೇ ಪದೇ ಉದ್ಯೋಗ ಬದಲಾಯಿಸುವುದು ಕೂಡ ನಿಮ್ಮ ಗೃಹ ಸಾಲ ತಿರಸ್ಕೃತಗೊಳ್ಳಲು ಕಾರಣವಾಗಿದೆ. ಜೊತೆಗೆ, ಕ್ರೆಡಿಟ್ ಸ್ಕೋರ್ ಅನುಸಾರ ಇದು ತಿರಸ್ಕೃತಗೊಳ್ಳುತ್ತದೆ.
ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಮಾರ್ಗ: ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿಟ್ಟುಕೊಳ್ಳುವುದು ಮುಖ್ಯ. ಈಗಾಗಲೇ ಸಾಲವನ್ನು ಪಡೆದಿದ್ದರೆ, ಅದರ ಇಎಂಐಗಳನ್ನು ಕಾಲಕ್ಕೆ ಸರಿಯಾಗಿ ಕಟ್ಟಬೇಕು. 750ಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮ್ಮ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕಡಿಮೆ ಸ್ಕೋರ್ನಿಂದ ನಿಮ್ಮ ಅರ್ಜಿ ವಜಾಗೊಂಡಿದ್ದರೆ, ಮುಂದಿನ ಬಾರಿ ಉತ್ತಮ ಸ್ಕೋರ್ ಹೊಂದುವತ್ತ ಗಮನಹರಿಸಿ. ಸಾಲದ ಕಂತು, ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಸರಿಯಾಗಿ ಕಟ್ಟುವುದರಿಂದಲೂ ಸ್ಕೋರ್ ಗಳಿಸಬಹುದು.
ಕ್ರೆಡಿಟ್ ಕಾರ್ಡ್ಗಳನ್ನು ಕಡಿಮೆ ದಿನಗಳ ಕಾಲ ಬಳಸಿ, ಅದನ್ನು ರದ್ದು ಮಾಡಿ, ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಕೂಡ ನಿಮ್ಮ ಲೋನ್ ಅರ್ಜಿ ಮೇಲೆ ಪರಿಣಾಮ ಬೀರುತ್ತದೆ. ಹೊಸ ಸಾಲ ಪಡೆಯುವ ಕಂಪನಿಗಳು ಈಗಾಗಲೇ ನೀವು ಹೊಂದಿರುವ ಸಾಲ ಮತ್ತು ಇಎಂಐಗಳನ್ನು ಸರಿಯಾಗಿ ಕಟ್ಟುತ್ತಿದ್ದೀರಾ ಎಂಬುದನ್ನು ಪರಿಶೀಲಿಸುತ್ತದೆ. ಜೊತೆಗೆ ನಿಮ್ಮ ಪ್ರಸ್ತುತ ಇಎಂಐಗಳು ನಿಮ್ಮ ಆದಾಯದ ಶೇ 45-50ಕ್ಕಿಂತ ಹೆಚ್ಚಿರಬಾರದು. ಈ ಅಂಕಿಅಂಶಗಳನ್ನು ಪರಿಗಣಿಸಿ ಬ್ಯಾಂಕ್ಗಳು ಸಾಲವನ್ನು ನೀಡುತ್ತವೆ.
ಅರ್ಜಿ ವಜಾ ಆಗದಂತೆ ಗಮನಹರಿಸಿ: ಪ್ರತಿಬಾರಿ ನೀವು ಲೋನ್ ಅಥವಾ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಿದಾಗ ಈ ಮಾಹಿತಿಗಳು ನಿಮ್ಮ ಕ್ರೆಡಿಟ್ ಸ್ಕೋರ್ನಲ್ಲಿ ದಾಖಲಿಸಲಾಗುವುದು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಲ ತೆಗೆದುಕೊಳ್ಳುವುದು ಉತ್ತಮ ಯೋಜನೆ ಅಲ್ಲ. ಒಂದು ಬಾರಿ ನಿಮ್ಮ ಅರ್ಜಿ ತಿರಸ್ಕೃತವಾದರೆ ಮತ್ತೆ ಇದು ಪುನರಾವರ್ತನೆಯಾಗುತ್ತದೆ. ಇದರಿಂದ ನೀವು ಸಮಸ್ಯೆಯಲ್ಲಿದ್ದು, ಸಾಲಕ್ಕಾಗಿ ಕಾದು ಕುಳಿತಿದ್ದೀರಾ ಎಂದು ಬ್ಯಾಂಕ್ಗಳು ಅಂದಾಜಿಸುತ್ತದೆ.
ತಿಂಗಳ ಆಧಾರದ ಮೇಲೆ ನೀವು ಕ್ರೆಡಿಟ್ ಕಾರ್ಡ್ ವರದಿ ಪಡೆಯಬಹುದು. ಈ ಕ್ರೆಡಿಟ್ ಕಾರ್ಡ್ ಅನ್ನು ನೀವು ಕಾಲ ಕಾಲಕ್ಕೆ ಅಪ್ಡೇಟ್ ಮಾಡಬೇಕು. ಅನೇಕ ಕಂಪನಿಗಳು ಇದನ್ನು ಉಚಿತವಾಗಿ ಈ ಸೇವೆ ನೀಡುತ್ತದೆ. ಈ ವರದಿಯಲ್ಲಿ ನಿಮ್ಮ ಸಾಲದ ವಹಿವಾಟಿನ ಮಾಹಿತಿ ಇರುತ್ತದೆ.
ಇದನ್ನೂ ಓದಿ: ಸಂದಿಗ್ಧ ಪರಿಸ್ಥಿತಿ ಎದುರಿಸಲು ತುರ್ತು ನಿಧಿ ಬಳಸಿ; ಅನಾವಶ್ಯಕ ಐಷಾರಾಮಿ ವಸ್ತು ಖರೀದಿಗಲ್ಲ