ಮುಂಬೈ: ಭಾರತೀಯ ಷೇರು ಮಾರುಕಟ್ಟೆಗಳು ಶುಕ್ರವಾರದಂದು ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ಬಿಎಸ್ಇ ಸೆನ್ಸೆಕ್ಸ್ 241.86 ಪಾಯಿಂಟ್ ಅಥವಾ ಶೇಕಡಾ 0.34ರಷ್ಟು ಏರಿಕೆಯಾಗಿ 71,106.96ಕ್ಕೆ ತಲುಪಿದೆ ಮತ್ತು ನಿಫ್ಟಿ 94.40 ಪಾಯಿಂಟ್ ಅಥವಾ ಶೇಕಡಾ 0.44 ಏರಿಕೆಯಾಗಿ 21,349.40ಕ್ಕೆ ತಲುಪಿದೆ.
ನಿಫ್ಟಿಯಲ್ಲಿ ಎಲ್ಐಸಿ, ಗೇಲ್, ವಿಪ್ರೋ, ಎಚ್ಸಿಎಲ್ ಟೆಕ್ನಾಲಜೀಸ್, ಟಾಟಾ ಮೋಟಾರ್ಸ್, ಹೀರೋ ಮೋಟೊಕಾರ್ಪ್ ಮತ್ತು ಟೆಕ್ ಮಹೀಂದ್ರಾ ಹೆಚ್ಚು ಲಾಭ ಗಳಿಸಿದರೆ, ಗ್ರಾಸಿಮ್ ಇಂಡಸ್ಟ್ರೀಸ್, ಎಸ್ಬಿಐ ಲೈಫ್ ಇನ್ಶೂರೆನ್ಸ್, ಬಜಾಜ್ ಫೈನಾನ್ಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ನಷ್ಟ ಅನುಭವಿಸಿದವು. ನಿಫ್ಟಿ ಬ್ಯಾಂಕ್ ಹೊರತುಪಡಿಸಿ ಎಲ್ಲಾ ವಲಯ ಸೂಚ್ಯಂಕಗಳು ಏರಿಕೆಯೊಂದಿಗೆ ಕೊನೆಗೊಂಡವು. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕ ಶೇಕಡಾ 0.7 ಮತ್ತು ಸ್ಮಾಲ್ಕ್ಯಾಪ್ ಶೇಕಡಾ 1ರಷ್ಟು ಏರಿಕೆಯಾಗಿದೆ.
ಸಾಗರೋತ್ತರ ಮಾರುಕಟ್ಟೆಗಳು ಶುಕ್ರವಾರ ಸ್ವಲ್ಪ ಏರಿಕೆ ಕಂಡವು. ಜಪಾನ್ ನಿಕ್ಕಿ225 ಶೇಕಡಾ 0.09 ಅಥವಾ 28.58 ಪಾಯಿಂಟ್ ಏರಿಕೆ ಕಂಡು 33,169.05ಕ್ಕೆ ಕೊನೆಗೊಂಡರೆ, ವಿಶಾಲ ಟೋಪಿಕ್ಸ್ ಸೂಚ್ಯಂಕ ಶೇಕಡಾ 0.45 ಅಥವಾ 10.45 ಪಾಯಿಂಟ್ ಏರಿಕೆ ಕಂಡು 2,336.43 ಕ್ಕೆ ತಲುಪಿದೆ. ಫೆಡರಲ್ ರಿಸರ್ವ್ ಹಣಕಾಸು ನೀತಿಯನ್ನು ಸರಾಗಗೊಳಿಸಲಿದೆ ಎಂಬ ಆಶಾವಾದದ ಹಿನ್ನೆಲೆಯಲ್ಲಿ ಯುಎಸ್ ಮಾರುಕಟ್ಟೆಗಳು ಗುರುವಾರ ಏರಿಕೆ ಕಂಡವು. ನಾಸ್ಡಾಕ್ ಶೇಕಡಾ 1.3, ಎಸ್ ಅಂಡ್ ಪಿ ಶೇ 500 ಶೇಕಡಾ 1 ಮತ್ತು ಡೋ ಜೋನ್ಸ್ ಶೇಕಡಾ 0.9ರಷ್ಟು ಏರಿಕೆ ಕಂಡಿವೆ.
ದುರ್ಬಲ ಅಮೆರಿಕನ್ ಕರೆನ್ಸಿ ಮತ್ತು ಸಕಾರಾತ್ಮಕ ಈಕ್ವಿಟಿ ಮಾರುಕಟ್ಟೆ ಭಾವನೆಗಳ ಮಧ್ಯೆ ರೂಪಾಯಿ ಶುಕ್ರವಾರ ಯುಎಸ್ ಡಾಲರ್ ವಿರುದ್ಧ 12 ಪೈಸೆ ಏರಿಕೆಯಾಗಿ 83.15 ಕ್ಕೆ ತಲುಪಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ ಕರೆನ್ಸಿ 83.25ಕ್ಕೆ ಪ್ರಾರಂಭವಾಯಿತು ಮತ್ತು ಇಂಟ್ರಾ-ಡೇನಲ್ಲಿ ಡಾಲರ್ ಎದುರು 83.11 ರಿಂದ 83.27ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ರೂಪಾಯಿ ಘಟಕವು ಅಂತಿಮವಾಗಿ 83.15 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 12 ಪೈಸೆ ಲಾಭ ದಾಖಲಿಸಿದೆ. ಜಾಗತಿಕ ತೈಲ ಬೆಲೆ ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.97 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 80.16 ಡಾಲರ್ಗೆ ತಲುಪಿದೆ.
ಇದನ್ನೂ ಓದಿ: 2023-24ರಲ್ಲಿ ಭಾರತದ ಜಿಡಿಪಿ ಶೇ 6.3ರಷ್ಟು ಬೆಳವಣಿಗೆ; ಐಎಂಎಫ್ ಅಂದಾಜು