ಬೆಂಗಳೂರು: ಬಾಕಿ ಪಾವತಿಸಿದ ಕೆಲವೇ ಗಂಟೆಗಳಲ್ಲಿ ಏರ್‌ಟೆಲ್‌ಗೆ 5G ಸ್ಪೆಕ್ಟ್ರಮ್ ಬ್ಯಾಂಡ್‌ಗಳನ್ನು ಮಂಜೂರು ಮಾಡಿದ ಕೇಂದ್ರ ಸರ್ಕಾರದ ಕ್ರಮದಿಂದ ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಸಾಕಷ್ಟು ಖುಷಿಯಾಗಿದ್ದಾರೆ. ಸುಲಭವಾಗಿ ವ್ಯಾಪಾರ ಮಾಡಲು ಸಾಧ್ಯವಾಗುವಂತೆ ಮಾಡಿದ್ದಕ್ಕಾಗಿ ಅವರು ದೂರಸಂಪರ್ಕ ಇಲಾಖೆಯನ್ನು (DoT) ಶ್ಲಾಘಿಸಿದ್ದಾರೆ.
ನಿನ್ನೆ ಏರ್‌ಟೆಲ್ ತನ್ನ ಸ್ಪೆಕ್ಟ್ರಮ್ ಬಾಕಿ ಮೊತ್ತವಾದ ರೂ 8,312.4 ಕೋಟಿಗಳನ್ನು ಪಾವತಿಸಿದೆ. ಇದರ ನಂತರ ಗೊತ್ತುಪಡಿಸಿದ ಸ್ಪೆಕ್ಟ್ರಮ್ ಬ್ಯಾಂಡ್‌ಗಳ ಹಂಚಿಕೆ ಪತ್ರವನ್ನು ಕೆಲವೇ ಗಂಟೆಗಳಲ್ಲಿ ನೀಡಲಾಗಿದೆ ಎಂದು ಸುನಿಲ್ ಭಾರ್ತಿ ಮಿತ್ತಲ್ ಆಗಸ್ಟ್ 18 ರಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
E- ಬ್ಯಾಂಡ್ ಹಂಚಿಕೆಯನ್ನು ಭರವಸೆ ನೀಡಿದಂತೆ ಸ್ಪೆಕ್ಟ್ರಮ್ ಜೊತೆಗೆ ನೀಡಲಾಯಿತು. ಯಾವುದೇ ಗಡಿಬಿಡಿಯಿಲ್ಲ, ಯಾವುದೇ ಫಾಲೋ ಅಪ್ ಇಲ್ಲ. ಕಾರಿಡಾರ್‌ಗಳ ಸುತ್ತಲೂ ಓಡುವ ಧಾವಂತವಿಲ್ಲ ಮತ್ತು ಯಾವುದೇ ಪೊಳ್ಳು ಭರವಸೆಗಳಿಲ್ಲ. ಸುಲಭವಾಗಿ ವ್ಯವಹಾರ ನಡೆಸಲು ಇದಕ್ಕಿಂತ ಉನ್ನತವಾದದ್ದು ಇನ್ನೇನೂ ಇಲ್ಲ ಎಂದು ಅವರು ಹೇಳಿದರು.
ದೂರಸಂಪರ್ಕ ಇಲಾಖೆಯೊಂದಿಗೆ ನನ್ನ 30 ವರ್ಷಗಳ ಅನುಭವದಲ್ಲಿ ಇಂಥ ಅನುಭವವಾಗಿದ್ದು ಇದೇ ಮೊದಲು. ವ್ಯವಹಾರ ಮಾಡಿದರೆ ಹೀಗೆ ಮಾಡಬೇಕು ಎಂದು ಸುನಿಲ್ ಮಿತ್ತಲ್ ದೂರಸಂಪರ್ಕ ಇಲಾಖೆಯನ್ನು ಮನತುಂಬಿ ಹೊಗಳಿದ್ದಾರೆ.
ಟೆಲಿಕಾಂ ವಲಯದ ಉನ್ನತ ಹಾಗೂ ಕೆಳಮಟ್ಟದಲ್ಲಿ ನಾಯಕತ್ವವು ಬಿಗಿಹಿಡಿತವನ್ನು ಹೊಂದಿದೆ. ಎಂಥ ಅದ್ಭುತ ಬದಲಾವಣೆ. ದೇಶವನ್ನೇ ಪರಿವರ್ತನೆ ಮಾಡುವಂಥ ಬದಲಾವಣೆ ಇದು. ಅಭಿವೃದ್ಧಿ ಹೊಂದಿದ ದೇಶವಾಗುವ ಕನಸಿಗೆ ಪೂರಕವಾದ ಬದಲಾವಣೆ ಇದು ಎಂದು ಅವರು ಹೇಳಿದ್ದಾರೆ.
ಸುನಿಲ್ ಮಿತ್ತಲ್ ನೇತೃತ್ವದ ಏರ್ಟೆಲ್ ಕಂಪನಿ 2022ರ ನಾಲ್ಕು ವರ್ಷಗಳ ಸ್ಪೆಕ್ಟ್ರಮ್ ಬಾಕಿಗಳನ್ನು ಮುಂಗಡವಾಗಿ ಪಾವತಿಸಿದೆ. ಕಳೆದ ಒಂದು ವರ್ಷದಲ್ಲಿ, ಏರ್‌ಟೆಲ್ ನಿಗದಿತ ಸಮಯಕ್ಕಿಂತ ಹೆಚ್ಚು ಮುಂಚಿತವಾಗಿ 24,333.70 ಕೋಟಿ ರೂ.ಗಳನ್ನು ಮುಂದೂಡಿದ ಸ್ಪೆಕ್ಟ್ರಮ್ ಬಾಕಿಗಳನ್ನು ಪಾವತಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ 5ಜಿ ಆರಂಭಿಸುವತ್ತ ಕಂಪನಿ ಗಮನ ಹರಿಸಲಿದೆ.