ಮುಂಬೈ : ಆಟೋ, ಖಾಸಗಿ ಬ್ಯಾಂಕ್ ಮತ್ತು ಎನರ್ಜಿ ಷೇರುಗಳು ಕುಸಿತವಾದ ಕಾರಣದಿಂದ ಭಾರತೀಯ ಷೇರು ಮಾರುಕಟ್ಟೆಗಳು ಮಂಗಳವಾರ ಇಳಿಕೆಯೊಂದಿಗೆ ಕೊನೆಗೊಂಡವು. ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 110 ಪಾಯಿಂಟ್ಸ್ ಕುಸಿದು 19,528 ಕ್ಕೆ ತಲುಪಿದೆ. ಎಸ್ &ಪಿ ಬಿಎಸ್ಇ ಸೆನ್ಸೆಕ್ಸ್ 316 ಪಾಯಿಂಟ್ಸ್ ಕಳೆದುಕೊಂಡು 65,512 ಕ್ಕೆ ತಲುಪಿದೆ.
ಹಣಕಾಸು, ಲೋಹ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಷೇರುಗಳು ಕುಸಿದವು. ಹಾಗೆಯೇ ಆಟೋ ಷೇರುಗಳು ಶೇಕಡಾ 1 ಕ್ಕಿಂತ ಹೆಚ್ಚು ಕಳೆದುಕೊಂಡವು. ಬಹುತೇಕ ವಲಯ ಸೂಚ್ಯಂಕಗಳು ಇಳಿಕೆಯಲ್ಲಿಯೇ ಕೊನೆಗೊಂಡವು. ಇಂದಿನ ವಹಿವಾಟಿನಲ್ಲಿ ಪಿಎಸ್‌ಯು ಬ್ಯಾಂಡ್ ಮತ್ತು ಕನ್ಸ್ಯೂಮರ್ ಡ್ಯೂರೇಬಲ್ ಲಾಭ ಗಳಿಸಿದವು.
ಒಎನ್ಜಿಸಿ, ಐಷರ್ ಮೋಟಾರ್ಸ್ ತಲಾ ಶೇಕಡಾ 3ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದರೆ, ಹಿಂಡಾಲ್ಕೊ ಮತ್ತು ಮಾರುತಿ ಕೂಡ ಇಂದಿನ ವಹಿವಾಟಿನಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದವು. ಟೈಟನ್, ಎಲ್ ಅಂಡ್ ಟಿ, ಬಜಾಜ್ ಟ್ವಿನ್‌ಗಳು ತಲಾ ಶೇಕಡಾ 1ರಷ್ಟು ಏರಿಕೆ ಕಂಡು ಸ್ಟಾಕ್ ಚಾರ್ಟ್ ಗಳಲ್ಲಿ ಅಗ್ರಸ್ಥಾನದಲ್ಲಿವೆ.
ಬಿಎಸ್ಇಯಲ್ಲಿ ಜೆಎಸ್ಡಬ್ಲ್ಯೂ ಎನರ್ಜಿ, ಬಿಎಲ್ ಕಶ್ಯಪ್ ಅಂಡ್ ಸನ್ಸ್, ಪಿಎನ್ಬಿ ಹೌಸಿಂಗ್ ಫೈನಾನ್ಸ್, ಎಲ್ &ಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಜ್ಯೋತಿ ಲ್ಯಾಬ್ಸ್, ಜಿಪಿಟಿ ಇನ್ ಫ್ರಾ ಪ್ರೊಜೆಕ್ಟ್ಸ್, ಡಿಬಿ ಕಾರ್ಪ್, ಕೆನರಾ ಬ್ಯಾಂಕ್, ಟೊರೆಂಟ್ ಪವರ್, ಜೊಮಾಟೊ ಸೇರಿದಂತೆ 250 ಕ್ಕೂ ಹೆಚ್ಚು ಷೇರುಗಳು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.
ವಿದೇಶಿ ಮಾರುಕಟ್ಟೆಗಳ ಪೈಕಿ ವಾಲ್ ಸ್ಟ್ರೀಟ್‌ನಲ್ಲಿ ಮಿಶ್ರ ವಹಿವಾಟಿನ ನಂತರ ಏಷ್ಯಾದ ಮಾರುಕಟ್ಟೆಗಳು ಮಂಗಳವಾರ ಕುಸಿದವು. ಹೆಚ್ಚುತ್ತಿರುವ ಬಾಂಡ್ ಇಳುವರಿಯಿಂದ ವಾಲ್ಸ್ಟ್ರೀಟ್ನಲ್ಲಿ ಖರೀದಿಯ ಒತ್ತಡ ಕಂಡು ಬಂದಿತು. ಜಪಾನ್ನ ನಿಕ್ಕಿ ಷೇರು ಮಾರುಕಟ್ಟೆ ಸರಾಸರಿ ನಾಲ್ಕು ತಿಂಗಳ ಕನಿಷ್ಠಕ್ಕೆ ಕುಸಿದಿದೆ. ಇದು ಶೇಕಡಾ 1.64ರಷ್ಟು ಕುಸಿತ ಕಂಡಿದೆ.
ಯುಎಸ್ ಬಡ್ಡಿದರಗಳು ಮತ್ತೆ ಹೆಚ್ಚಾಗಲಿವೆ ಎಂಬ ನಿರೀಕ್ಷೆಯಲ್ಲಿ ಭಾರತೀಯ ರೂಪಾಯಿ ಮಂಗಳವಾರ ದುರ್ಬಲವಾಗಿ ಕೊನೆಗೊಂಡಿತು. ಹಿಂದಿನ ವಹಿವಾಟಿನ 83.04 ಕ್ಕೆ ಹೋಲಿಸಿದರೆ ಯುಎಸ್ ಡಾಲರ್ ವಿರುದ್ಧ ರೂಪಾಯಿ 83.2050ಕ್ಕೆ ಕೊನೆಗೊಂಡಿತು. ದಿನದ ಆರಂಭದಲ್ಲಿ, ಡಾಲರ್ ಸೂಚ್ಯಂಕವು 107.21 ಕ್ಕೆ ಏರಿಕೆಯಾಗಿತ್ತು. ಇದು ನವೆಂಬರ್ 2022ರ ನಂತರದ ಗರಿಷ್ಠವಾಗಿದೆ.
ಇದನ್ನೂ ಓದಿ: ನಾಸಿಕ್ ಸಗಟು ಈರುಳ್ಳಿ ವ್ಯಾಪಾರಿಗಳ 13 ದಿನಗಳ ಮುಷ್ಕರ ಅಂತ್ಯ: ಹರಾಜು ಪುನಾರಂಭ