ಮುಂಬೈ : ಮಿಶ್ರ ಜಾಗತಿಕ ಪ್ರವೃತ್ತಿಗಳ ನಡುವೆ ಬ್ಯಾಂಕಿಂಗ್ ಮತ್ತು ವಿದ್ಯುತ್ ಷೇರುಗಳಲ್ಲಿನ ಮಾರಾಟದಿಂದಾಗಿ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಆರಂಭಿಕ ಗರಿಷ್ಠ ಮಟ್ಟದಿಂದ ಕೆಳಗಿಳಿದು ಸಮತಟ್ಟಾಗಿ ಕೊನೆಗೊಂಡವು.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.02 ಅಥವಾ 11.43 ಅಂಕ ಏರಿಕೆಯಾಗಿ 65,087.25 ರಲ್ಲಿ ಕೊನೆಗೊಂಡಿತು. ಎನ್ಎಸ್ಇಯಲ್ಲೂ ಇದೇ ರೀತಿಯ ಪ್ರವೃತ್ತಿಗಳು ಕಂಡುಬಂದವು. ವಿಶಾಲವಾದ 50 ಷೇರುಗಳ ನಿಫ್ಟಿ ಶೇಕಡಾ 0.02 ಅಥವಾ 4.80 ಅಂಕ ಏರಿಕೆಯಾಗಿ 19,347.45 ರಲ್ಲಿ ಕೊನೆಗೊಂಡಿತು. ಹೆಚ್ಚಿನ ಯುರೋಪಿಯನ್ ಷೇರುಗಳು ನಕಾರಾತ್ಮಕವಾಗಿ ವಹಿವಾಟು ನಡೆಸುತ್ತಿದ್ದರೆ, ಏಷ್ಯಾದ ಷೇರುಗಳು ಮಿಶ್ರ ವಹಿವಾಟಿನಲ್ಲಿ ದಿನವನ್ನು ಕೊನೆಗೊಳಿಸಿವೆ.
ಸೆನ್ಸೆಕ್ಸ್ ಪ್ಯಾಕ್ ನೋಡುವುದಾದರೆ, ಹೆಚ್ಚಿನ ಷೇರುಗಳು ಏರಿಕೆಯಲ್ಲಿ ಕೊನೆಗೊಂಡವು. ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಶೇ 4.99, ಟಾಟಾ ಸ್ಟೀಲ್ ಶೇ 2.09, ಮಾರುತಿ ಸುಜುಕಿ ಶೇ 1.87, ಮಹೀಂದ್ರಾ ಅಂಡ್ ಮಹೀಂದ್ರಾ ಶೇ 1.31 ಮತ್ತು ಇನ್ಫೋಸಿಸ್ ಶೇ 1.19ರಷ್ಟು ಏರಿಕೆ ಕಂಡಿವೆ. ವಹಿವಾಟಿನ ಮಧ್ಯೆ ಸೆನ್ಸೆಕ್ಸ್ 65,052.74 ಅಂಕಗಳ ಕನಿಷ್ಠ ಮಟ್ಟವನ್ನು ತಲುಪಿತ್ತು.
ಹಾಗೆಯೇ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ ಗರಿಷ್ಠ 19,452.80ಕ್ಕೆ ಮತ್ತು ಕನಿಷ್ಠ 19,334.75 ಅಂಕಗಳಿಗೆ ತಲುಪಿತ್ತು. ನಿಫ್ಟಿಯಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ (ಶೇ 4.99), ಟಾಟಾ ಸ್ಟೀಲ್ (ಶೇ 2.09), ಮಾರುತಿ ಸುಜುಕಿ (ಶೇ 1.75), ಐಷರ್ ಮೋಟಾರ್ಸ್ (ಶೇ 1.24) ಮತ್ತು ಎಂ& ಎಂ (ಶೇ 1.19) ಲಾಭ ಗಳಿಸಿದವು.
ವಲಯವಾರು ನೋಡಿದರೆ ಮಿಶ್ರ ಪ್ರವೃತ್ತಿ ಮುಂದುವರೆದಿದೆ. ಇದರಲ್ಲಿ ಲೋಹ ಮತ್ತು ರಿಯಾಲ್ಟಿ ಲಾಭ ದಾಖಲಿಸಿದರೆ, ಇಂಧನ ಮತ್ತು ಬ್ಯಾಂಕಿಂಗ್ ಮಂದಗತಿಯಲ್ಲಿವೆ. ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ಶೇಕಡಾ 0.55 ರಷ್ಟು ಏರಿಕೆ ಕಂಡರೆ, ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 0.83 ರಷ್ಟು ಏರಿಕೆಯಾಗಿದೆ.
ಏಷ್ಯಾ ಮಾರುಕಟ್ಟೆಗಳಲ್ಲಿ ಜಪಾನ್ ನ ಬೆಂಚ್ ಮಾರ್ಕ್ ನಿಕೈ 225 ಶೇಕಡಾ 0.3, ದಕ್ಷಿಣ ಕೊರಿಯಾದ ಕೊಸ್ಪಿ ಶೇಕಡಾ 0.4 ಮತ್ತು ಹಾಂಗ್ ಕಾಂಗ್ ನ ಹ್ಯಾಂಗ್ ಸೆಂಗ್ ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾದವು. ಶಾಂಘೈ ಕಾಂಪೊಸಿಟ್ ಶೇಕಡಾ 0.1 ರಷ್ಟು ಏರಿಕೆಯಾಗಿದೆ. ಯುರೋಪ್ನಲ್ಲಿ ಫ್ರಾನ್ಸ್ನ ಸಿಎಸಿ 40 ಆರಂಭಿಕ ವಹಿವಾಟಿನಲ್ಲಿ ಶೇಕಡಾ 0.1 ರಷ್ಟು ಕುಸಿದರೆ, ಜರ್ಮನಿಯ ಡಿಎಎಕ್ಸ್ ಶೇಕಡಾ 0.3 ರಷ್ಟು ಕುಸಿದಿದೆ. ಬ್ರಿಟನ್ನ ಎಫ್ಟಿಎಸ್ಇ-100 ಶೇಕಡಾ 0.1 ರಷ್ಟು ಏರಿಕೆಯಾಗಿದೆ.
ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಶೇಕಡಾ 0.55 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 85.96 ಡಾಲರ್ಗೆ ತಲುಪಿದೆ. ಮಂಗಳವಾರ, ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರು (ಎಫ್ಪಿಐ) ನಿವ್ವಳ ಖರೀದಿದಾರರಾಗಿದ್ದು, 61.51 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದಾರೆ ಎಂದು ಬಿಎಸ್ಇ ಅಂಕಿ ಅಂಶಗಳು ತಿಳಿಸಿವೆ.
ಇದನ್ನೂ ಓದಿ : ಸ್ಟಾಕ್ ಬ್ರೋಕಿಂಗ್ ವ್ಯವಹಾರಕ್ಕೆ ಫೋನ್ಪೆ ಪ್ರವೇಶ; 'Share.Market' ಆ್ಯಪ್ ಆರಂಭ