ಮುಂಬೈ : ಭಾರತ ಮತ್ತು ಯುಎಸ್ ನಿಂದ ನಿರೀಕ್ಷೆಗಿಂತ ಕಡಿಮೆ ಹಣದುಬ್ಬರದ ಅಂಕಿ - ಅಂಶಗಳ ಕಾರಣದಿಂದ ಭಾರತದ ಷೇರು ಮಾರುಕಟ್ಟೆಗಳು ಬುಧವಾರ ಏರಿಕೆಯೊಂದಿಗೆ ಕೊನೆಗೊಂಡಿವೆ. ಎಸ್ &ಪಿ ಬಿಎಸ್ಇ ಸೆನ್ಸೆಕ್ಸ್ 742 ಪಾಯಿಂಟ್ ಅಥವಾ ಶೇಕಡಾ 1.14 ರಷ್ಟು ಏರಿಯಾಗಿ ಕಂಡು 65,676 ರಲ್ಲಿ ಕೊನೆಗೊಂಡರೆ, ನಿಫ್ಟಿ-50 232 ಪಾಯಿಂಟ್ ಅಥವಾ ಶೇಕಡಾ 1.19 ರಷ್ಟು ಏರಿಕೆ ಕಂಡು 19,676 ಕ್ಕೆ ಕೊನೆಯಾಗಿದೆ.
ಟೆಕ್ ಮಹೀಂದ್ರಾ, ವಿಪ್ರೋ, ಟಾಟಾ ಸ್ಟೀಲ್, ಇನ್ಫೋಸಿಸ್, ಟಾಟಾ ಮೋಟಾರ್ಸ್, ಜೆಎಸ್ಡಬ್ಲ್ಯೂ ಸ್ಟೀಲ್, ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್ಟೆಲ್, ಆಕ್ಸಿಸ್ ಬ್ಯಾಂಕ್, ಐಟಿಸಿ, ಕೋಟಕ್ ಬ್ಯಾಂಕ್, ಎಚ್ಸಿಎಲ್ ಟೆಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಇಂದು ಶೇಕಡಾ 1 ರಿಂದ 4 ರಷ್ಟು ಏರಿಕೆ ಕಂಡಿವೆ.
ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕ ಶೇಕಡಾ 0.90 ರಷ್ಟು ಮತ್ತು ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 1.13 ರಷ್ಟು ಏರಿಕೆಯಾಗಿದೆ. ನಿಫ್ಟಿ ರಿಯಾಲ್ಟಿ ಸೂಚ್ಯಂಕ ಶೇಕಡಾ 2.95 ರಷ್ಟು ಏರಿಕೆ ಕಂಡರೆ, ನಿಫ್ಟಿ ಐಟಿ ಸೂಚ್ಯಂಕ ಶೇಕಡಾ 2.59, ನಿಫ್ಟಿ ಆಟೋ ತಲಾ 1.7 ಶೇಕಡಾ ಮತ್ತು ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ 1.2 ಶೇಕಡಾ ಏರಿಕೆಯಾಗಿವೆ.
ಭಾರತದ ರೂಪಾಯಿ ಬುಧವಾರ ಯುಎಸ್ ಡಾಲರ್ ವಿರುದ್ಧ 21 ಪೈಸೆ ಏರಿಕೆಯಾಗಿ 83.12 ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು. ದೇಶೀಯ ಇಕ್ವಿಟಿ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಗಳು ರೂಪಾಯಿಗೆ ಬಲ ನೀಡಿವೆ ಎಂದು ಟ್ರೇಡರ್ಸ್ ತಿಳಿಸಿದ್ದಾರೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 83.03 ಕ್ಕೆ ಪ್ರಾರಂಭವಾಯಿತು ಮತ್ತು ಅಂತಿಮವಾಗಿ ಡಾಲರ್ ವಿರುದ್ಧ 83.12 ಕ್ಕೆ ಸ್ಥಿರವಾಯಿತು. ರೂಪಾಯಿ ಹಿಂದಿನ ಮುಕ್ತಾಯಕ್ಕಿಂತ 21 ಪೈಸೆ ಲಾಭ ದಾಖಲಿಸಿದೆ.
ಜಪಾನ್ ನಿಕೈ ಷೇರು ಸರಾಸರಿ ಏರಿಕೆಯಾಗಿದ್ದು, ಸುಮಾರು ಎರಡು ತಿಂಗಳಲ್ಲಿ ಮೊದಲ ಬಾರಿಗೆ 33,000ರದ ಮಟ್ಟವನ್ನು ದಾಟಿದೆ. ನಿಕ್ಕಿ ಷೇರುಪೇಟೆ ಸೂಚ್ಯಂಕ ಇಂದು ಶೇ.2.52 ರಷ್ಟು ಏರಿಕೆ ಕಂಡಿದೆ. ವಿಶಾಲವಾದ ಟೋಪಿಕ್ಸ್ ಶೇಕಡಾ 1.19ರಷ್ಟು ಮೌಲ್ಯ ಸೇರಿಸಿದೆ.
ಚೀನಾದ ಬ್ಲೂ-ಚಿಪ್ ಸಿಎಸ್ಐ 300 ಸೂಚ್ಯಂಕವು ಶೇಕಡಾ 0.7 ರಷ್ಟು ಏರಿಕೆ ಕಂಡರೆ, ಶಾಂಘೈ ಕಾಂಪೊಸಿಟ್ ಸೂಚ್ಯಂಕ ಶೇಕಡಾ 0.6 ರಷ್ಟು ಏರಿಕೆಯಾಗಿದೆ. ಹಾಂಕಾಂಗ್ ನ ಹಾಂಗ್ ಸೆಂಗ್ ಸೂಚ್ಯಂಕ ಶೇಕಡಾ 3.9ರಷ್ಟು ಏರಿಕೆ ಕಂಡಿದ್ದು, ಕಳೆದ ನಾಲ್ಕು ತಿಂಗಳಲ್ಲೇ ಅತ್ಯಧಿಕ ಏರಿಕೆಯಾಗಿದೆ. ಪ್ರಮುಖ ಆರ್ಥಿಕತೆಗಳಲ್ಲಿ ನಿಧಾನಗತಿ ಹಣದುಬ್ಬರದ ನಿರೀಕ್ಷೆಯಿಂದ ಯುರೋಪಿಯನ್ ಷೇರುಗಳು ಏರಿಕೆ ಕಂಡವು.
ಇದನ್ನೂ ಓದಿ : ಯಾರಿಗೆ ಸೇರಲಿದೆ ಸಹಾರಾದ ₹25 ಸಾವಿರ ಕೋಟಿ? ಹೂಡಿಕೆದಾರರ ಕತೆ ಏನು?