ನವದೆಹಲಿ: ಕಡಿಮೆ ವೆಚ್ಚದಲ್ಲಿ ಜನರಿಗೆ ವಿಮಾನಯಾನ ಸೌಲಭ್ಯ ನೀಡುತ್ತಿರುವ ಸಂಸ್ಥೆಯಾದ ಸ್ಪೈಸ್‌ಜೆಟ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಇಪಿ) ಸಂಜೀವ್ ತನೇಜಾ ಬುಧವಾರ ರಾಜೀನಾಮೆ ನೀಡಿದ್ದಾರೆ. ಕಂಪನಿಯ ನಷ್ಟದ ಪ್ರಮಾಣ ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.
ಸಂಸ್ಥೆಯು ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 789 ಕೋಟಿ ನಷ್ಟವನ್ನು ವರದಿ ಮಾಡಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ರೂ 729 ಕೋಟಿ ನಷ್ಟ ಕಂಡಿತ್ತು. ದಾಖಲೆಯ ಪ್ರಮಾಣದಲ್ಲಿ ಹೆಚ್ಚಾದ ಇಂಧನ ಬೆಲೆ ಮತ್ತು ರೂಪಾಯಿ ಮೌಲ್ಯಗಳ ಕುಸಿತದಿಂದ ಕಂಪನಿಗೆ ನಷ್ಟ ಎದುರಾಗಿದೆ.
ವರದಿಯಾದ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 2,478 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದ ಅದೇ ತ್ರೈಮಾಸಿಕದಲ್ಲಿ ಆದಾಯವು 1,266 ಕೋಟಿ ರೂ. ಆಗಿತ್ತು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಪೈಸ್‌ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಮಾತನಾಡಿ, ಉದ್ಯಮವು ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಠಿಣವಾದ ವ್ಯಾಪಾರ ವಹಿವಾಟು ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಇದರಿಂದಾಗಿ 2022ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಪ್ರಗತಿ ಮತ್ತು ಚೇತರಿಕೆಯ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.
ಕಂಪನಿಯ ಭವಿಷ್ಯ ಮತ್ತು ನಮ್ಮ ಮುಂದುವರಿದ ಚೇತರಿಕೆಯ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ. ನಮ್ಮ ಭವಿಷ್ಯದ ಯೋಜನೆಗಳನ್ನು ಸಾಧಿಸುವ ಸಲುವಾಗಿ ಮಂಡಳಿಯು ಹೊಸದಾಗಿ ಬಂಡವಾಳವನ್ನು ತರಲು ಒಪ್ಪಿಗೆ ನೀಡಿದೆ. ಕಂಪನಿಯು ಶೀಘ್ರದಲ್ಲೇ ಹೂಡಿಕೆ ಬ್ಯಾಂಕರ್‌ಗಳೊಂದಿಗೆ 200 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆಯ ಪ್ರಯತ್ನಗಳನ್ನು ಆರಂಭಿಸಲಿದೆ ಎಂದು ಅವರು ಹೇಳಿದರು.