ಮುಂಬೈ: ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಮೌಲ್ಯ ಏರಿಕೆಯಿಂದಾಗಿ ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ಅವರ ಸಂಪತ್ತಿನ ನಿವ್ವಳ ಮೌಲ್ಯ ಕಳೆದ ಒಂದೇ ವಾರದಲ್ಲಿ 5.6 ಬಿಲಿಯನ್ ಡಾಲರ್ (46,663 ಕೋಟಿ ರೂ.) ಹೆಚ್ಚಾಗಿದೆ. ಅದಾನಿ ಗ್ರೂಪ್ ಕಂಪನಿಗಳು ಹಣಕಾಸು ಅಕ್ರಮ ಎಸಗಿವೆ ಎಂದು ಅಮೆರಿಕದ ಶಾರ್ಟ್ ಸೆಲ್ಲಿಂಗ್ ಕಂಪನಿ ಹಿಂಡೆನ್ಬರ್ಗ್ ಕಳೆದ ವರ್ಷ ಆರೋಪಿಸಿತ್ತು. ಆದರೆ ಅದಾಗಿ ವರ್ಷದ ನಂತರ ಅದಾನಿ ಕಂಪನಿಯ ಷೇರುಗಳು ಮತ್ತೆ ಏರಿಕೆಯತ್ತ ಸಾಗಿದ್ದು, ಗೌತಮ್ ಅದಾನಿಯವರ ಸಂಪತ್ತು ಕೂಡ ಈಗ ಹೆಚ್ಚಾಗಿದೆ.
ಹಿಂಡೆನ್ಬರ್ಗ್ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಅಲ್ಲದೆ ಅದಾನಿ ಗ್ರೂಪ್ ವಿರುದ್ಧದ ಮಾಧ್ಯಮ ವರದಿಗಳನ್ನೇ ಸತ್ಯವೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ಮಂಗಳವಾರ ಅದಾನಿ ಷೇರು ಮೌಲ್ಯ ಹೆಚ್ಚಾಗಿವೆ.
ಮಾರುಕಟ್ಟೆಯು ಸುಪ್ರೀಂ ಕೋರ್ಟ್ನ ಹೇಳಿಕೆಯನ್ನು ತೀರ್ಪಿನ ಸಕಾರಾತ್ಮಕ ಸಂಕೇತವೆಂದು ಪರಿಗಣಿಸಿದ್ದರಿಂದ ಈ ವಾರ ಕಂಪನಿಯ ಷೇರುಗಳಲ್ಲಿ ಉತ್ತಮ ಖರೀದಿ ಕಂಡು ಬಂದಿತು. ಮಂಗಳವಾರ, ಕಂಪನಿಯ ಮಾರುಕಟ್ಟೆ ಮೌಲ್ಯವು 12 ಬಿಲಿಯನ್ ಡಾಲರ್ ಏರಿಕೆಯಾಗಿದೆ ಎಂದು ವರದಿಗಳು ಹೇಳಿವೆ. ತನ್ನ ವಿರುದ್ಧದ ಹಿಂಡೆನ್ಬರ್ಗ್ ವರದಿಯಿಂದ ಗ್ರೂಪ್ 153 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿತ್ತು. ಆದರೆ ಕಳೆದ ಕೆಲ ತಿಂಗಳುಗಳಲ್ಲಿ ಕಂಪನಿ ಸಾಕಷ್ಟು ಚೇತರಿಸಿಕೊಂಡಿದೆ.
ಹಿಂಡೆನ್ಬರ್ಗ್ ವರದಿಯ ಬಗ್ಗೆ ತನಿಖೆ ಮಾಡಲು ನ್ಯಾಯಾಲಯ ನೇಮಿಸಿದ ಆರು ಸದಸ್ಯರ ತಜ್ಞರ ಸಮಿತಿಯು ಮೇ ತಿಂಗಳಲ್ಲಿ ತನ್ನ ಮಧ್ಯಂತರ ವರದಿ ಸಲ್ಲಿಸಿದ್ದು, ಅದಾನಿ ಷೇರುಗಳಲ್ಲಿ ಯಾವುದೇ ನಿಯಂತ್ರಕ ವೈಫಲ್ಯ ಅಥವಾ ಬೆಲೆಗಳನ್ನು ತಿರುಚಿದ ಸಾಕ್ಷಿಗಳು ಕಂಡು ಬಂದಿಲ್ಲ ಎಂದು ಹೇಳಿದೆ. ಏತನ್ಮಧ್ಯೆ GQG Partners ಮತ್ತು ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿಗಳು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರಿಂದ ಗ್ರೂಪ್ನ ಷೇರುಗಳ ಮೌಲ್ಯ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.
ಗೌತಮ್ ಅದಾನಿ ಅವರ ಸಂಪತ್ತಿನ ಪ್ರಸ್ತುತ ನಿವ್ವಳ ಮೌಲ್ಯ 59.5 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ. ಹಿಂಡೆನ್ಬರ್ಗ್ ವರದಿಯ ಆರೋಪಗಳಿಂದ ಅದಾನಿ 55 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ. ಆರೋಪಗಳು ಕೇಳಿಬಂದಾಗ ಅವರು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ಈಗ ಅವರು ವಿಶ್ವದ 20 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಇದನ್ನೂ ಓದಿ : 2 ಸಾವಿರ ರೂ. ಮುಖಬೆಲೆಯ ಶೇ 97ರಷ್ಟು ನೋಟು ವಾಪಸ್: ಆರ್ಬಿಐ