ನಿನ್ನೆಯಿಂದಲೇ ಅತಿ ಅವಶ್ಯಕ ವಸ್ತುಗಳ ಮೇಲೆ ಜಿಎಸ್‌ಟಿ ಅನ್ವಯವಾಗುತ್ತಿದ್ದು, ಎಲ್ಲ ದುಬಾರಿ ಆಗಿವೆ. 25 ಕೆಜಿ ತೂಕದ ಸಿರಿಧಾನ್ಯ, ಬೇಳೆಕಾಳು ಮತ್ತು ಹಿಟ್ಟಿನಂತಹ ಅಗತ್ಯ ಆಹಾರ ಪದಾರ್ಥಗಳ ಏಕ ಪ್ಯಾಕೇಟ್ಗಳಿಗೆ ಹೊಸ ದರ ಅನ್ವಯವಾಗಲಿದೆ. ಅಷ್ಟೇ ಅಲ್ಲ ಈ ಮುಂಚೆಯೇ ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಸರಕುಗಳೆಂದು ಪರಿಗಣಿಸಲಾಗುತ್ತದೆ.
ಬಹು ಚಿಲ್ಲರೆ ಪ್ಯಾಕೆಟ್ಗಳನ್ನು ಒಳಗೊಂಡಿರುವ ಪ್ಯಾಕೇಜ್ ಅಥವಾ ತಲಾ 10 ಕೆಜಿ ಹಿಟ್ಟಿನ 10 ಚಿಲ್ಲರೆ ಪ್ಯಾಕ್‌ಗಳನ್ನು ಒಳಗೊಂಡಿರುವ ಪ್ಯಾಕೇಜ್‌ಗೆ ಜಿಎಸ್‌ಟಿ ಅನ್ವಯಿಸುತ್ತದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸ್ಪಷ್ಟಪಡಿಸಿದೆ.
ನೀವು ಇಷ್ಟು ತಿಳಿದುಕೊಳ್ಳಿ: ಆದರೆ, ಚಿಲ್ಲರೆ ಅಂಗಡಿಯವನು 25 ಕೆಜಿ ಪ್ಯಾಕ್‌ನಲ್ಲಿ ತಯಾರಕರಿಂದ ಅಥವಾ ವಿತರಕರಿಂದ ಖರೀದಿಸಿದ ವಸ್ತುವನ್ನು ಲೂಸ್ ಆಗಿ ಅಂದರೆ ಬಿಡಿ ಬಿಡಿಯ ಪ್ರಮಾಣದಲ್ಲಿ ಪೂರೈಸಿದರೆ, ಗ್ರಾಹಕರಿಗೆ ಅಂತಹ ಮಾರಾಟದ ಮೇಲೆ ಯಾವುದೇ ಜಿಎಸ್‌ಟಿ ಅನ್ವಯಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ಈ ಆಹಾರ ಪದಾರ್ಥಗಳನ್ನು ಖರೀದಿಸುವವರ ಮುಂದೆ ಸರಕುಗಳನ್ನು ತೂಕ ಮಾಡುವ 'ಹಳೆಯ' ಅಭ್ಯಾಸವನ್ನು ಅನುಸರಿಸುವ ಅಂಗಡಿಕಾರರು ಗ್ರಾಹಕರಿಗೆ ಲೂಸ್ ಆಗಿಯೇ ಮಾರಾಟ ಮಾಡಿದರೆ ಆಗ ಯಾವುದೇ ಜಿಎಸ್‌ಟಿ ಅನ್ವಯ ಆಗುವುದಿಲ್ಲ.
ಜಿಎಸ್‌ಟಿ ಉದ್ದೇಶಕ್ಕಾಗಿ ಮಾಡಿದ ಪ್ಯಾಕೇಟ್ ಅಥವಾ ಪ್ಯಾಕೇಜ್ ಮೇಲೆ ಜಿಎಸ್‌ಟಿ ಇಲ್ಲ: 25 ಕೆಜಿ/25 ಲೀಟರ್‌ಗಿಂತ ಹೆಚ್ಚು ತೂಕ ಹೊಂದಿರುವ ಧಾನ್ಯಗಳು, ಬೇಳೆಕಾಳುಗಳು ಮತ್ತು ಹಿಟ್ಟಿನಂತಹ ಒಂದೇ ಪ್ಯಾಕೇಜ್ GST ಯ ಉದ್ದೇಶಗಳಿಗಾಗಿ ಪೂರ್ವ - ಪ್ಯಾಕೇಟ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಸರಕುಗಳಾಗಿದ್ದರೆ ಅದಕ್ಕೆ ಯಾವುದೇ ಜಿಎಸ್‌ಟಿ ಅನ್ವಯಿಸುವುದಿಲ್ಲ. ಕೈಗಾರಿಕಾ ಮತ್ತು ಸಾಂಸ್ಥಿಕ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದರೆ ಅದಕ್ಕೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗುತ್ತದೆ .
ಮಾಂಸ ಮೀನಿಗೆ ಜಿಎಸ್‌ಟಿ ಅನ್ವಯ: ಬೇಳೆಕಾಳುಗಳು ಮತ್ತು ಧಾನ್ಯಗಳ ಹೊರತಾಗಿ, ಒಣಗಿದ ಮಖಾನಾ, ಪಫ್ಡ್ ರೈಸ್, ಮೆಸ್ಲಿನ್ ಹಿಟ್ಟು, ಲೇಬಲ್ ಮಾಡಿದ ಮಾಂಸ ಮತ್ತು ಮೀನುಗಳು ಮೇಲೂ ಶೇ 5 ರಷ್ಟು ಜಿಎಸ್‌ಟಿ ಅನ್ವಯ ಆಗಲಿದೆ. ಹೆಚ್ಚುವರಿಯಾಗಿ, ಮಾವಿನ ತಿರುಳು ಸೇರಿದಂತೆ ಎಲ್ಲ ರೀತಿಯ ಮಾವಿನ ಮೇಲೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಆದಾಗ್ಯೂ, ಸಡಿಲವಾದ, ಬ್ರಾಂಡ್ ಮಾಡದ ಮತ್ತು ಲೇಬಲ್ ಮಾಡದ ಸರಕುಗಳು GST ಯಿಂದ ವಿನಾಯಿತಿ ಪಡೆಯಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ
ಡೈರಿ ಉತ್ಪನ್ನಗಳಿಗೆ ಬಳಸುವ ಟೆಟ್ರಾ ಪ್ಯಾಕ್ಗೂ ಶೇ 18 ರಷ್ಟು ಜಿಎಸ್‌ಟಿ: ಎರಡು ದಿನಗಳ GST ಕೌನ್ಸಿಲ್ ಸಭೆಯ ನಂತರ ಕೇಂದ್ರ ಸರ್ಕಾರವು ಹಲವಾರು ಇತರ ಸರಕುಗಳು ಮತ್ತು ಸೇವೆಗಳನ್ನು ತೆರಿಗೆ ಅಡಿಗೆ ತಂದಿದೆ. ದ್ರವ ಪಾನೀಯಗಳು ಅಥವಾ ಡೈರಿ ಉತ್ಪನ್ನಗಳನ್ನು ಪ್ಯಾಕೇಜಿಂಗ್ ಮಾಡಲು ಬಳಸುವ ಟೆಟ್ರಾ ಪ್ಯಾಕ್ (ಅಥವಾ ಅಸೆಪ್ಟಿಕ್ ಪ್ಯಾಕೇಜಿಂಗ್ ಪೇಪರ್) ಮೇಲಿನ GST ಈಗ ಶೇ 18 ಆಗಿದ್ದರೆ, ಆಳವಾದ ಕೊಳವೆ ಬಾವಿ ಟರ್ಬೈನ್ ಪಂಪ್‌ಗಳು ಮತ್ತು ಬೈಸಿಕಲ್ ಪಂಪ್‌ಗಳಂತಹ ವಿದ್ಯುತ್ ಚಾಲಿತ ಪಂಪ್‌ಗಳ ಮೇಲೆ ಶೇ 18 ರಷ್ಟು ಜಿಎಸ್ಟಿಯನ್ನು ವಿಧಿಸಲಾಗಿದೆ.
ಬರವಣಿಗೆ ಇಂಕ್, ಬ್ಲೇಡ್ ಸೇರಿ ಸಣ್ಣ ಸಣ್ಣ ಅವಶ್ಯಕ ವಸ್ತುಗಳ ಮೇಲೆ ತೆರಿಗೆ ಬಾರ: ಪ್ರಿಂಟಿಂಗ್, ಬರವಣಿಗೆ ಅಥವಾ ಡ್ರಾಯಿಂಗ್ ಇಂಕ್, ಕತ್ತರಿಸುವ ಬ್ಲೇಡ್‌ಗಳನ್ನು ಹೊಂದಿರುವ ಚಾಕುಗಳು, ಪೇಪರ್ ಚಾಕು, ಪೆನ್ಸಿಲ್ ಶಾರ್ಪನರ್ ಮತ್ತು ಬ್ಲೇಡ್, ಚಮಚ, ಫೋರ್ಕ್, ಲ್ಯಾಡಲ್ಸ್, ಸ್ಕಿಮ್ಮರ್‌ಗಳು ಮತ್ತು ಕೇಕ್-ಸರ್ವರ್‌ಗಳಂತಹ ವಸ್ತುಗಳಿಗೆ ಈ ಮೊದಲು ಇದ್ದ ಶೇ 12 ರಷ್ಟು ತೆರಿಗೆಯ ಬದಲಿಗೆ ಇನ್ಮುಂದೆ ಶೇ 18 ರಷ್ಟು ತೆರಿಗೆಯನ್ನು ಗ್ರಾಹಕರು ಕೊಡಬೇಕಾಗಿರುವುದು ಅನಿವಾರ್ಯ. ಎಲ್‌ಇಡಿ ಲ್ಯಾಂಪ್‌ಗಳು, ಲೈಟ್‌ಗಳು ಮತ್ತು ಫಿಕ್ಚರ್‌ಗಳು, ಅವುಗಳ ಮೆಟಲ್ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗೆ ಸಹ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಹೋಟೆಲ್,ಆಸ್ಪತ್ರೆ ಕೊಠಡಿಗಳ ಬೆಲೆಯೂ ಇನ್ಮುಂದೆ ದುಬಾರಿ: ನಿತ್ಯ 5 ಸಾವಿರಕ್ಕಿಂತ ಹೆಚ್ಚು ಬಾಡಿಗೆ ಹೊಂದಿರುವ ಆಸ್ಪತ್ರೆ ಕೊಠಡಿಗೆ ಇನ್ಮುಂದೆ ಶೇ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.( ಇದರಲ್ಲಿ ಐಎಸ್ಯು ಹೊರತುಪಡಿಸಿ) ಹೋಟೆಲ್ ಕೊಠಡಿಗಳು ಸಹ ದುಬಾರಿಯಾಗುತ್ತವೆ. ಏಕೆಂದರೆ ದಿನಕ್ಕೆ ರೂ 1000 ವರೆಗಿನ ಲಾಡ್ಜ್ ಕೊಠಡಿ ಮೇಲೆ ಶೇ 12 ತೆರಿಗೆ ಕೊಡಬೇಕಾಗುತ್ತದೆ.
ಹಣದುಬ್ಬರಕ್ಕೆ ಕಡಿವಾಣ ಹಾಕಬೇಕಾದ ಸರ್ಕಾರ ಅಗತ್ಯ ವಸ್ತುಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಜನ ಸಾಮಾನ್ಯರ ಮೇಲೆ ಪ್ರಹಾರ ಮಾಡಿದೆ. ಅಷ್ಟೇ ಅಲ್ಲ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆಯನ್ನು ಸೃಷ್ಟಿಸಲಿದೆ. ಸಣ್ಣ ಅಂಗಡಿದಾರರ ಖರೀದಿ ವೆಚ್ಚವೂ ಹೆಚ್ಚಾಗುತ್ತದೆ. ಏಕೆಂದರೆ ಅವರು ತಮ್ಮ ಖರೀದಿಗಳ ಮೇಲೆ ಜಿಎಸ್‌ಟಿ ಪಾವತಿಸುತ್ತಾರೆ. ಆದರೆ ಆನ್‌ಲೈನ್ ಡೀಲರ್‌ಗಳು ಮತ್ತು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳ ತೀವ್ರ ಸ್ಪರ್ಧೆಯಿಂದಾಗಿ ಗ್ರಾಹಕರಿಗೆ ಸಂಪೂರ್ಣ ಹೊರೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ ಎಂಬ ಸಣ್ಣ ಸಮಾಧಾನವೊಂದೇ ನಮಗಿರುವ ಆಶಾಭಾವ.
ಇದನ್ನು ಓದಿ:ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಯ ಬರೆ.. ನಾಳೆಯಿಂದಲೇ ಮೊಸರು, ಮಜ್ಜಿಗೆ, ಲಸ್ಸಿ ದುಬಾರಿ